ವಿಜಯಪುರ : ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಚ್ಚವ ಆಲೋಚನೆ ಕೈ ಬಿಡಲು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ನ್ಯಾಯವಾದಿ ಶ್ರೀನಾಥ ಪೂಜಾರಿ ಯವರ ನೇತೃತ್ವದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಘೋಷಣೆ ಕೂಗಲು ಪ್ರಾರಂಭಿಸಿದಾಗ ಸಭೆಯಲ್ಲಿದ್ದ ಎಲ್ಲಾ ಸಿಂಡಿಕೇಟ್ ಸದಸ್ಯರು ಹಾಗೂ ಕುಲಪತಿಗಳು, ಕುಲಸಚಿವರು, ಸಭೆಯನ್ನು ನಿಲ್ಲಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ನ್ಯಾಯವಾದಿ ಶ್ರೀನಾಥ ಪೂಜಾರಿ ಮಾತನಾಡಿ ಈ ಭಾಗದ ಮಹಿಳೆಯರ ಶಿಕ್ಷಣ ಗುಣಮಟ್ಟ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಂಜುಂಡಪ್ಪ ವರದಿಯ ಆಧಾರದ ಮೇಲೆ ಸ್ಥಾಪಿತವಾಗಿದೆ, ರಾಜ್ಯದ ಎಕೈಕ ಮಹಿಳಾ ವಿಶ್ವವಿದ್ಯಾಲಯ ಇದಾಗಿದ್ದು ಜಿಲ್ಲೆಯ ಹಾಗೂ ನಾಡಿಗೆ ಹೆಮ್ಮೆಯ ವಿಷಯವಾಗಿದೆ. ಈಗಿನ ಸರಕಾರ ಹಾಗೂ ಅದರ ಪ್ರತಿನಿಧಿಗಳು ಸೇರಿಕೊಂಡು ಮಹಿಳಾ ವಿಶ್ವವಿದ್ಯಾಲಯವನ್ನು Co – Education ಮಾಡುವ ಮೂಲಕ ಮಹಿಳಾ ವಿಶ್ವವಿದ್ಯಾಲಯ ಮುಚ್ಚಲು ಹೊರಟಿರುವುದು ಕಳವಳಕಾರಿ ಎಂದರು.
ಎಲ್ಲಾ ಸಿಂಡಿಕೇಟ್ ಸದಸ್ಯರುಗಳಿಗೆ ಈ ವಿಶ್ವವಿದ್ಯಾಲಯ ಉಳಿಸಲು ನಿಮ್ಮ ನಿಲುವು ಹಾಗೂ ಸರಕಾರದ ನಡೆ ಏನು ಎಂದು ಸ್ಪಷ್ಟಪಡಿಸಬೇಕೆಂದು ಶ್ರೀನಾಥ್ ಪೂಜಾರಿ ಪಟ್ಟು ಹಿಡಿದರು, ಆಗ ಸಿಂಡಿಕೇಟ್ ಸದಸ್ಯ ವೆಂಕಟೇಶ್ ಮಾತನಾಡಿ, “ಈ ವಿಶ್ವವಿದ್ಯಾಲಯ ಉಳಿಸಲು ನಾವು ನಿಮ್ಮ ಜೊತೆಗಿದ್ದು ಹೊರಾಟ ಮಾಡಲು ಸಿದ್ಧ ಇರುವುದಾಗಿ” ಹೇಳಿದರು. ಸರಕಾರದ ನಿಲುವು ಅಥವಾ ಈ ಸುದ್ದಿ ಗಾಳಿ ಸುದ್ದಿಯಾಗಿದ್ದರೆ ಸಂಬಂಧಿಸಿದವರು ಪ್ರತಿಕ್ರಿಯೆ ನೀಡಿಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯರುಗಳಾದ ಪ್ರೊ.ವಿ.ಸಿ.ಸವದಿ, ಡಾ. ಜ್ಯೋತ್ಸ್ನಾ ಚಂದ್ರಕಾಂತ್ ಸಮಾಜ, ಪ್ರೊ. ವೆಂಕಟೇಶ್, ಶ್ರೀಮತಿ ನಿವೇದಿತಾ,ಡಾ.ಲಕ್ಷ್ಮೀ ತೆಲ್ಲೂರು, ಪ್ರೊ. ಡಿ.ಬಿ.ಕಂಬಾರ್, ಶ್ರೀಮತಿ ಶಿಲ್ಪಶ್ರೀ, ಡಾ. ಗುಲೇ ಆರಿಫ,ಪ್ರೊ. ಅಜೀಜ ಮಕಾನದಾರ್ ಹಾಗೂ ಕುಲಪತಿಗಳಾದ ಪ್ರೊ. ಬಿ. ಕೆ. ತುಳಸಿಮಾಲಾ, ಕುಲಸಚಿವರದ ಆರ್ ಸುನಂದಮ್ಮ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೊತಿ, ಮೌಲ್ಯಮಾಪನ ಕುಲಸಚಿವ ಪ್ರೊ ರಮೇಶ್, ಹಾಗೂ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ವಿಜಯಪುರ ಜಿಲ್ಲಾ ಸಂಚಾಲಕ ಹರ್ಷವರ್ಧನ್ ಪೂಜಾರಿ, ಅಕ್ಷಯ್ ಹಾಜಿಮನಿ, ಮಹಾದೇಶ್ ಚಲವಾದಿ, ಮಡಿವಾಳಪ್ಪ, ರಾಕೇಶ್ ಕುಮಟಗಿ, ಆನಂದ ಮುದುರ, ಉಮೇಶ್ ಅಲ್ಲದೆ ಹಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.