ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಇದೇ ಮಾದರಿಯ ಕ್ರಮ ಬೇರೆಯವರಿಗೂ ಅನ್ವಯಿಸುವುದಾದರೆ ಬಿಜೆಪಿಯಲ್ಲಿ ಕೆಲವೇ ಕೆಲವು ಸಂಸದರು ಉಳಿಯಲಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಆಡಳಿತಾರೂಢ ಪಕ್ಷಕ್ಕೂ ಇದೇ ಮಾದರಿಯ ಕ್ರಮ ಅನ್ವಯಿಸಿ ನೋಡಲಿ. ಆಗ ಉಭಯ ಸದನಗಳಲ್ಲಿಯೂ ಕೆಲವೇ ಕೆಲವು ಬಿಜೆಪಿ ಸಂಸದರು ಉಳಿಯಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ‘ಪ್ರಶ್ನೆಗಾಗಿ ಲಂಚ’ ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿ ಅವರನ್ನು ಉಚ್ಚಾಟಿಸಿದ ಕ್ರಮದ ವಿರುದ್ಧ ಅಖಿಲೇಷ್ ಯಾದವ್ ಕಿಡಿಗಾರಿದ್ದಾರೆ.