ನವದೆಹಲಿ: ಅಮೆರಿಕಕ್ಕೆ ಪ್ರಯಾಣಿಸಲು ಬೆಂಗಳೂರು ನಿಲ್ದಾಣಕ್ಕೆ ಆಗಮಿಸಿದ್ದ ‘ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾʼ ಸಂಸ್ಥೆಯ ಮಾಜಿ ಅಧ್ಯಕ್ಷ, ಖ್ಯಾತ ಲೇಖಕ ಆಕಾರ್ ಪಟೇಲ್ ಅವರನ್ನು ತಡೆಹಿಡಿಯಲಾಗಿದೆ. ಕೇಂದ್ರ ತನಿಖಾ ತಂಡ –ಸಿಬಿಐ ಸಂಸ್ಥೆಯು ನಿಗಾವಹಿಸಿರುವವರ ಪಟ್ಟಿಯಲ್ಲಿ ಆಕಾರ್ ಹೆಸರು ಇರುವುದರಿಂದ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ ಪ್ರಯಾಣಕ್ಕೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದ ಆಕಾರ್ ಪಟೇಲ್
2020ರಲ್ಲಿ ಪ್ರಧಾನಿ ಮೋದಿ, ಬಿಜೆಪಿ-ಆರೆಸ್ಸೆಸ್ ವಿರುದ್ಧ ಟ್ವೀಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ – ಐಪಿಸಿಯ ಹಲವು ಕಾಯ್ದೆಗಳ ಪ್ರಕಾರ ಆಕಾರ್ ವಿರುದ್ಧ ದೂರು ದಾಖಲಾಗಿತ್ತು. ಆ ಬಳಿಕ ಆಕಾರ್ ಪಟೇಲ್ ಪಾಸ್ ಪೋರ್ಟ್ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದರೆ ಅಮೆರಿಕಾಗೆ ತುರ್ತಾಗಿ ಪ್ರಯಾಣಿಸಬೇಕಾದ ಆವಶ್ಯಕತೆ ಇರುವುದರಿಂದ ಸೂರತ್ ಸೆಷನ್ಸ್ ಜಡ್ಜ್ ಮತ್ತು ಆರನೇ ಹೆಚ್ಚುವರಿ ನ್ಯಾಯಾಲಯದ ಮೂಲಕ 5 ದಿನಗಳ ಅವಧಿಗೆ ಆಕಾರ್ ಪಾಸ್ ಪೋರ್ಟ್ ಪಡೆದಿದ್ದರು. ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವ ವೇಳೆ 2 ಲಕ್ಷ ರೂಪಾಯಿ ಬಾಂಡ್ ಇಡುವಂತೆ ನ್ಯಾಯಾಲಯ ಆಕಾರ್ ಗೆ ಸೂಚಿಸಿತ್ತು.
ನ್ಯಾಯಾಲಯದ ಆದೇಶವಿದ್ದರೂ ತಮ್ಮ ಪ್ರಯಾಣಕ್ಕೆ ತಡೆಒಡ್ಡಿರುವ ಕುರಿತು ಸ್ವತಃ ಆಕಾರ್ ಪಟೇಲ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. “ವಿದೇಶ ಪ್ರಯಾಣಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆಒಡ್ಡಲಾಗಿದೆ. ಅಮೆರಿಕಾಗೆ ಪ್ರಯಾಣಿಸಲೆಂದೇ ನ್ಯಾಯಾಲಯದ ಮೂಲಕ ಪಾಸ್ ಪೋರ್ಟ್ ಮರಳಿ ಪಡೆದಿದ್ದೆ. ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿ ನನ್ನ ಹೆಸರಿದ್ದರೂ ತಡೆಹಿಡಿಯಲಾಗಿದೆʼ ಎಂದು ಆಕಾರ್ ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯದ ಆದೇಶದ ಪ್ರತಿಯನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಲಂಡನ್ ಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪತ್ರಕರ್ತೆ ರಾಣಾ ಯ್ಯೂಬ್ ಅವರನ್ನು ಎಮಿಗ್ರೇಷನ್ ಅಧಿಕಾರಿಗಳು ತಡೆದಿದ್ದರು.