ಪುಣೆ: ದೆಹಲಿ ಮೂಲದ ಏರ್ ಇಂಡಿಯಾ ವಿಮಾನವು ಪುಣೆಯಿಂದ ಹೊರಡುವ ಸಂದರ್ಭದಲ್ಲಿ ಸಾಮಾನು ಸರಂಜಾಮು ಸಾಗಿಸುವ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ, ತನ್ನ ಹಾರಾಟವನ್ನು ರದ್ದುಪಡಿಸಿದೆ.
ಈ ಸಂದರ್ಭದಲ್ಲಿ ಸುಮಾರು 200 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ಹೇಳಿದ್ದಾರೆ. ‘ಈ ಘಟನೆಯು ಗುರುವಾರ ಸಂಜೆ 4ರ ಸುಮಾರಿಗೆ ನಡೆದಿದೆ. ಪ್ರಯಾಣಿಕರಿಗೆ ಅವರ ಪ್ರಯಾಣ ಶುಲ್ಕವನ್ನು ಸಂಪೂರ್ಣ ಹಿಂದಿರುಗಿಸಲಾಗಿದೆ. ಪರ್ಯಾಯವಾಗಿ ಉಚಿತವಾಗಿ ಅವರ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಮುಂದೆ ಅಂತರರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸುವವರಿಗೆ ಇತರ ವಿಮಾನಗಳಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ.
ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.