ಬೆಂಗಳೂರು: ಚಿತ್ರದುರ್ಗದಲ್ಲಿ ನಡೆಯುವ ಅಹಿಂದ ಸಮಾವೇಶ ಲಿಂಗಾಯತರ ಸಮಾವೇಶಕ್ಕೆ ಪ್ರತಿಯಾಗಿ ಅಲ್ಲ. ಯಾವುದೇ ಸಮುದಾಯಗಳ ವಿರುದ್ಧವೂ ಅಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತರು ಸಮಾವೇಶ ನಡೆಸಿರುವುದಕ್ಕೆ ಪ್ರತಿಯಾಗಿ ಅಹಿಂದ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳುವಂತಿಲ್ಲ. ಅವರಂತೆ ನಾವು ಕೂಡ ನಮ್ಮ ಸಮಾಜದ ಸಮಾವೇಶ ನಡೆಸುತ್ತಿದ್ದೇವೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ತಿರಸ್ಕರಿಸುವಂತೆ ಲಿಂಗಾಯತ ಸಮಾವೇಶದಲ್ಲಿ ನಿರ್ಣಯ ಕೈಗೊಂಡಿರುವ ಕುರಿತು ಸಚಿವರನ್ನು ಕೇಳಿದಾಗ, ವರದಿಯನ್ನು ಇನ್ನೂ ಸರ್ಕಾರ ಸ್ವೀಕರಿಸಿಲ್ಲ. ಈಗಲೇ ತಿರಸ್ಕರಿಸುವಂತೆ ಬೇಡಿಕೆ ಇಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಈ ವರದಿ ಯಾವುದೇ ಜಾತಿಗೆ ಸೀಮಿತವಾದುದಲ್ಲ. ಇಡೀ ರಾಜ್ಯದ ಜನರ ಮಾಹಿತಿ ಇದೆ. ಹಾಗಿರುವಾಗ ಒಕ್ಕಲಿಗರು, ಲಿಂಗಾಯತರು ವರದಿ ಸ್ವೀಕರಿಸದಂತೆ ಬೇಡಿಕೆ ಇಡುತ್ತಿರುವುದು ಸರಿಯಲ್ಲ. ವರದಿ ಸ್ವೀಕರಿಸುವುದಾಗಿ ಮುಖ್ಯಮಂತ್ರಿಯವರು ಈಗಾಗಲೇ ಹೇಳಿದ್ದಾರೆ ಎಂದು ಹೇಳಿದ್ದಾರೆ.