ಬಿತ್ತನೆ ಕಾರ್ಯ ಮಾಡದಂತೆ ಕಾವೇರಿ ಕಣಿವೆ ಭಾಗದ ರೈತರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮನವಿ

Prasthutha|

ಬೆಂಗಳೂರು: ಮಳೆ ಹೀಗೆ ಕಡಿಮೆಯಾದ್ರೆ ಆಹಾರ ಉತ್ಪಾದನೆಗೆ ಸಮಸ್ಯೆ ಆಗುತ್ತದೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

- Advertisement -

 ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಬಿತ್ತನೆ ಕಾರ್ಯ ಮಾಡದಂತೆ ಕಾವೇರಿ ಕಣಿವೆ ಭಾಗದ ರೈತರಿಗೆ ಮನವಿ ಮಾಡಿದ್ದಾರೆ. ಈಗಾಗಲೇ ನೀರಿನ ಅಭಾವದಿಂದ ತಿಂಗಳು, 15 ದಿನಕ್ಕೆ ನೀರು ಬಿಡುತ್ತಿದ್ದೇವೆ. ಮಳೆ ಬರದಿದ್ದರೆ ನೀರು ಬಿಡುವುದು ಬಂದ್ ಮಾಡಬೇಕಾಗುತ್ತದೆ. ಹಾಗಾಗಿ ರೈತರು ಎಚ್ಚರಿಕೆಯಿಂದ ಬಿತ್ತನೆ ಮಾಡಬೇಕು ಎಂದರು.

ಈಗಿರುವ ಕೆಆರ್​ಎಸ್ ಜಲಾಶಯದ ನೀರಿನ ಮಟ್ಟ ಎಷ್ಟು?

- Advertisement -

ಈಗಾಗಲೇ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಹೋರಾಟಗಳು ಶುರುವಾಗಿದೆ. ಕರ್ನಾಟಕದಲ್ಲಿಯೇ ಸರಿಯಾಗಿ ಮಳೆಯಾಗದ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್​ಎಸ್ ಜಲಾಶಯದ ನೀರಿನ ಮಟ್ಟ 105 ಅಡಿಗೆ ಕುಸಿದಿದೆ. ಜಲಾಶಯದ ಗರಿಷ್ಟ ಮಟ್ಟ 124.80 ಅಡಿ ಇದ್ದು, ಸದ್ಯ ಜಲಾಶಯದ ನೀರಿನ ಮಟ್ಟ 105.70 ಅಡಿ ಇದೆ. ಒಳ ಹರಿವು 4983 ಕ್ಯೂಸೆಕ್ ಇದ್ದು, ಹೊರ ಹರಿವು 15,247 ಕ್ಯೂಸೆಕ್ ಇದೆ. ಈ ಮಧ್ಯೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಎಷ್ಟು ಸರಿಯೆಂದು ಕರ್ನಾಟಕದ ಜನ ಪ್ರಶ್ನಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.

ನೀರಿಗಾಗಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ತಮಿಳುನಾಡು

ನೀರಿಗಾಗಿ ಮತ್ತೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿದ್ದು, ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಇತ್ತ ರಾಜ್ಯ ಸರ್ಕಾರವು ಸಹ ಕರ್ನಾಟಕದಲ್ಲಿನ ನೀರಿನ ವಸ್ತುಸ್ಥಿತಿ ವಿವರಿಸಲು ನಿನ್ನೆ(ಆ.21) ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಿದೆ. ಕರ್ನಾಟಕದ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಮಳೆ ಕೊರತೆಯಾಗಿ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಬಗ್ಗೆ ಹಾಗೂ ಡ್ಯಾಂಗಳಲ್ಲಿ ನೀರಿನ ಕೊರತೆ ಬಗ್ಗೆ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್​​ ವಾದ ಮಂಡಿಸಲಿದ್ದಾರೆ.

ಇನ್ನು ಕಳೆದ ಆಗಸ್ಟ್​​​​​ 14 ರಂದು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದ ತಮಿಳುನಾಡು, ಹಾಲಿ ಇರುವ ಬೆಳೆಗಳ ರಕ್ಷಣೆಗಾಗಿ ನಿತ್ಯ 24 ಸಾವಿರ ಕ್ಯೂಸೆಕ್​​​​​​​​ ಕಾವೇರಿ ನದಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿತ್ತು. ಸುಪ್ರೀಂ ಸೂಚನೆಯಂತೆ ಕೆಆರ್​​ಎಸ್​​​​ ಡ್ಯಾಂನಿಂದ ನೀರನ್ನು ಬಿಡಲಾಗಿತ್ತು. ಆದ್ರೆ, ಇದೀಗ ಕೆಆರ್​ಎಸ್​ನಲ್ಲಿ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ನೀರಿಗಾಗಿ ಎರಡು ರಾಜ್ಯಗಳು ಸುಪ್ರೀಂ ಕೋರ್ಟ್​ನಲ್ಲಿ ವಾದ ಮಂಡಿಸಲಿದೆ.

Join Whatsapp