ನವೆಂಬರ್ 10ರಿಂದ 20ರವೆಗೆ ‘ಹಳ್ಳಿ ಉಳಿಸಿ’ ಅಭಿಯಾನ
ಬೆಂಗಳೂರು: “ಇಂದಿನ ಸಂದರ್ಭದಲ್ಲಿ ಮೂರ್ಖರು ಮಾತ್ರ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ. ಬುದ್ಧಿಯುಳ್ಳವರು ಯಾರೂ ಸುಮ್ಮನಿರಲಾರರು. ಕೃಷಿ ಕಾಯ್ದೆಗಳನ್ನು ವಿರೋಧಿಸದಿರುವವರು ಮೂರ್ಖರ ಪಟ್ಟಿಗೆ ಬರುತ್ತಾರೆ” ಎಂದು ದೆಹಲಿಯ ರೈತ ಆಂದೋಲನದ ನಾಯಕ, ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಹರನೇಕ್ ಸಿಂಗ್ ಟೀಕಿಸಿದ್ದಾರೆ.
ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಐತಿಹಾಸಿಕ ರೈತಾಂದೋಲನ ಕಲಿಸುವ ಪಾಠ- ತೋರುವ ಹಾದಿ: ಮಂಥನ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಡೀ ದೇಶವನ್ನು ಬೆಳೆ ಬೆಳೆದು ಸಾಕುವ ರೈತರ ತಲೆಮಾರುಗಳನ್ನೇ ಮುಗಿಸಲು ಹೊರಟಿರುವ ಕೇಂದ್ರದ ನೀತಿಗಳು ಈ ದೇಶದ ಸಾರ್ವಭೌಮತೆಗೇ ಮಾರಕ. ಇದರ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯ. ಈ ಹೋರಾಟದಲ್ಲಿ ದಕ್ಷಿಣದ ರಾಜ್ಯಗಳ್ನು ಒಗ್ಗೂಡಿಸುವುದು ಕರ್ನಾಟಕಕ್ಕೆ ಮಾತ್ರ ಸಾಧ್ಯ.., ನಿಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ” ಎಂದರು.
“ಎಲ್ಲರ ಮನಸ್ಸಿನಲ್ಲಿ ರೈತರ ಚಳವಳಿ ಇಷ್ಟು ದೀರ್ಘವಾಗಿ ನಡೆದದ್ದು ಹೇಗೆ ಎಂಬ ಪ್ರಶ್ನೆ ಇದೆ. ಇದು ಒಂದು ವರ್ಷದ ಕೆಲಸವಲ್ಲ. 28 ವರ್ಷಗಳ ಹೋರಾಟದ ಫಲವಿದು. ಜಂಟಿ ವಿಚಾರಧಾರೆಯುಳ್ಳವರು ಒಂದು ವೇದಿಕೆಗೆ ಬರಬೇಕೆಂಬ ಪ್ರಯೋಗವನ್ನು ಬೇರೆ ವಿಚಾರಗಳಿಗೆ ನಾವು ಪ್ರಯೋಗಿಸಲು ಮುಂದಾದೆವು. ಅದು ಈಗ ಸಂಯುಕ್ತ ಕಿಸಾನ್ ಮೋರ್ಚಾದ ರೂಪದಲ್ಲಿ ಮುಂದೆ ಬಂದಿದೆ. ಎಸ್‌ಕೆಎಂ ಹೋರಾಟವು ತಾವು ಏನು ಮಾಡಿದರೂ ನಡೆಯುತ್ತದೆಂದು ಭಾವಿಸಿದ್ದ ಬಿಜೆಪಿಯ ಕಪಾಳಕ್ಕೆ ಬಾರಿಸಿದೆ” ಎಂದು ತೀಕ್ಷ್ಣವಾಗಿ ನುಡಿದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ಕರ್ನಾಟಕ ಸರ್ಕಾರವು ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆ ಇಲ್ಲಿನ ರೈತ ಸಮುದಾಯವನ್ನು ಇಡಿಯಾಗಿ ಅಳಿಸಿ ಹಾಕುವ ಕೆಲಸ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಹಾದಿಯಲ್ಲಿ ನಡೆದಿದ್ದೇ ಆದರೆ ರೈತರ ತೀವ್ರ ವಿರೋಧ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಮಲ್ಲಿಗೆಯವರು ಅಧ್ಯಕ್ಷತೆ ವಹಿಸಿದ್ದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮುಖಂಡ ಮಾವಳ್ಳಿ ಶಂಕರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ಅಖಿಲ ಭಾರತ ರೈ ಸಂಘರ್ಷ ಸಮನ್ವಯ ಸಮಿತಿಯ ನಾಯಕಿ ಕವಿತಾ ಕುರಗಂಟಿ ಮಾತನಾಡಿದರು.
ಇದೇ ಸಂದರ್ಭ ನವೆಂಬರ್ 10ರಿಂದ 20ರವೆಗೆ ಕರ್ನಾಟಕ ಜನಶಕ್ತಿ ವತಿಯಿಂದ ‘ಹಳ್ಳಿ ಉಳಿಸಿ’ ಅಭಿಯಾನ ಹಮ್ಮಿಕೊಂಡಿರುವುದಾಗಿ ಸಂಘಟಕರು ಘೋಷಿಸಿದರು.