ನವದೆಹಲಿ: ಕೇಂದ್ರ ಸರ್ಕಾರ ಪ್ರಕಟಿಸಿರುವ ಸೈನಿಕರ ನೇಮಕಾತಿಯ ಹೊಸ ‘ಅಗ್ನಿಪಥ ಯೋಜನೆ’ ವಿರುದ್ಧ ತೆಲಂಗಾಣ, ಬಿಹಾರ, ಒಡಿಶಾ, ಹರಿಯಾಣ, ಸಿಕಂದರಾಬಾದ್ ಸೇರಿದಂತೆ ವಿವಿಧೆಡೆ ಶುಕ್ರವಾರ ಭಾರಿ ಪ್ರತಿಭಟನೆ ನಡೆದಿದೆ.
ಈ ನಡುವೆ ಸೇನೆ ಸೇರಲು ಪೂರ್ವತಯಾರಿ ನಡೆಸುತ್ತಿದ್ದ ಇಬ್ಬರು ಯುವಕರು ‘ಅಗ್ನಿಪಥ’ ವಿರೋಧಿ ಆಕ್ರೋಶಕ್ಕೆ ಬಲಿಯಾಗಿದ್ದಾರೆ.
ಸಿಕಂದರಾಬಾದ್ ನಲ್ಲಿ ‘ಅಗ್ನಿಪಥ’ ಯೋಜನೆ ವಿರೋಧಿಸಿ ನಡೆಸುತ್ತಿರುವ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದಿದ್ದು, ವ್ಯಕ್ತಿಯೊಬ್ಬರು ಮೃತ್ತಪಟ್ಟಿರುವುದಾಗಿ ವರದಿಯಾಗಿದೆ.
ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಯುವಕನನ್ನು ರಾಕೇಶ್ [22] ಎಂದು ಗುರುತಿಸಲಾಗಿದೆ.
ತೆಲಂಗಾಣದ ವಾರಂಗಲ್ ಜಿಲ್ಲೆಯ ರಾಕೇಶ್, ರೈತನ ಮಗನಾಗಿದ್ದು, ಆರು ತಿಂಗಳ ಹಿಂದೆ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಲಿಖಿತ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿದೆ. ರಾಕೇಶ್ ಅವರ ಸಹೋದರಿ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪರೀಕ್ಷೆ ರದ್ದು ಹಿನ್ನೆಲೆ: ಯುವಕ ಆತ್ಮಹತ್ಯೆ
ಅಗ್ನಿಪಥ’ ವಿರೋಧಿಸಿ ಒಡಿಶಾ ರಾಜ್ಯದ ಕಟಕ್ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಜೋರಾಗಿದ್ದು, ಈ ನಡುವೆ ಸೇನಾ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ರದ್ದು ಮಾಡಲಾದ ಕ್ರಮದಿಂದ ಬೇಸತ್ತು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾಲಸೋರ್ ಜಿಲ್ಲೆಯ ತೆಂಟಲ್ ಗ್ರಾಮದ ಧನಂಜಯ್ ಮೋಹಂತಿ ಸೇನೆ ಸೇರುವ ಬಯಕೆಯನ್ನು ಹೊಂದಿದ್ದ ಮತ್ತು ಕಳೆದ ನಾಲ್ಕು ವರ್ಷಗಳಿಂದ ಅದಕ್ಕಾಗಿ ಕಠಿಣ ಪರಿಶ್ರಮ ನಡೆಸುತ್ತಿದ್ದ. ಆದರೆ ಅಗ್ನಿಪಥ ಯೋಜನೆಯಿಂದಾಗಿ ಲಿಖಿತ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಬೇಸತ್ತು ತನ್ನ ಪುತ್ರ ಮನೆಯಲ್ಲೇ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದಾನೆ ಎಂದು ಧನಂಜಯ್ ತಂದೆ, ಮಾಧ್ಯಮಗಳೆದುರು ಆರೋಪಿಸಿದರು.
ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಈ ನೇಮಕಾತಿ ಯೋಜನೆ ವಿರುದ್ಧ ದೇಶದಾದ್ಯಂತ ಆಕಾಂಕ್ಷಿಗಳು ಆಕ್ರೋಶಗೊಂಡಿದ್ದು, ಹಲವೆಡೆ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ.