ನವದೆಹಲಿ: ಕೇಂದ್ರ ಸರ್ಕಾರದ ನೂತನ ನೇಮಕಾತಿ ಯೋಜನೆಯಾದ ಅಗ್ನಿಪಥ ವಿರುದ್ಧದ ಪ್ರತಿಭಟನೆ ಇದೀಗ ಎಂಟು ರಾಜ್ಯಗಳಿಗೆ ಹಬ್ಬಿದ್ದು, ಕಾಂಗ್ರೆಸ್ ಪಕ್ಷವು ಸೇನಾ ಉದ್ಯೋಗಾಕಾಂಕ್ಷಿಗಳೊಂದಿಗೆ ನಿಲ್ಲಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ವಿವಾದಾತ್ಮಕ ಯೋಜನೆಯನ್ನು ಹಿಂಪಡೆಯುವರೆಗೂ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.
ಸದ್ಯ ಅಗ್ನಿಪಥದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಸುಮಾರು 20 ರೈಲು, ಹಲವಾರು ವಾಹನಗಳು ಮತ್ತು ಬಿಜೆಪಿ ಕಚೇರಿಗಳು ಬೆಂಕಿಗಾಹುತಿಯಾಗಿದೆ.
ನೂತನ ಸೇನಾ ನೇಮಕಾತಿ ಯೋಜನೆಯನ್ನು ಯಾವುದೇ ಗೊತ್ತುಗುರಿಯಿಲ್ಲದ ಮತ್ತು ಸೇನಾ ಉದ್ಯೋಗಕಾಂಕ್ಷಿಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ಘೋಷಿಸಲಾಗಿದೆ ಎಂದು ಸೋನಿಯಾ ಗಾಂಧಿ ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರವು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿ ನೂತನ ಸೇನಾ ನೇಮಕಾತಿ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ನನಗೆ ನಿರಾಶೆಯಾಗಿದೆ. ಇದು ಗೊತ್ತುಗುರಿಯಿಲ್ಲದಂತಿದ್ದು, ಅನೇಕ ಮಾಜಿ ಸೈನಿಕರು ಕೂಡ ಈ ಯೋಜನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.