ಅಗ್ನಿಪಥ್ ಯೋಜನೆಯಿಂದ ದೇಶದ ಭದ್ರತೆಗೆ ಅಪಾಯ: ಎಂ.ಎಂ.ಪಲ್ಲಂ ರಾಜು

Prasthutha|

ಬೆಂಗಳೂರು: ಸರ್ಕಾರ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು. ಇದು ಸೇನೆಯ ಹೋರಾಟದ ಸಾಮರ್ಥ್ಯ ಹಾಗೂ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಯೋಜನೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಎಂ.ಎಂ ಪಲ್ಲಂ ರಾಜು ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕರಾಳ ಕಾಯ್ದೆ ಮಾದರಿಯಲ್ಲೇ, ಈ ಯೋಜನೆಯನ್ನು ಕೇಂದ್ರ ಸರ್ಕಾರ ಯಾರೊಂದಿಗೂ ಚರ್ಚೆ ಮಾಡದೇ, ಸರಿಯಾದ ಆಲೋಚನೆ ಇಲ್ಲದೆ ಜಾರಿಗೆ ತಂದಿದೆ. ಈ ಯೋಜನೆ ಬಗ್ಗೆ ಸರ್ಕಾರ ಸಂಸತ್ತಿನಲ್ಲಿ ಚರ್ಚೆ ಮಾಡಿಲ್ಲ. ಅಗ್ನಿಪಥ್ ಯೋಜನೆ ದೇಶದ ಸೇನೆಯ ಸಿದ್ಧತೆಯನ್ನು ದುರ್ಬಲಗೊಳಿಸಲಿದೆ. ಇದು ದೇಶದ ಭದ್ರತೆಗೆ ಅಪಾಯ ಹಾಗೂ ಸೇನೆಗೆ ಸೇರುವ ಯುವಕರ ಆಸಕ್ತಿಯನ್ನು ಕಸಿಯುವ ಪ್ರಯತ್ನವಾಗಿದೆ ಎಂದು ದೂರಿದರು.

ಯುವಕರು ಸೇನೆಗೆ ಸೇರಬೇಕಾದರೆ, ಬಹಳ ಹೆಮ್ಮೆಯಿಂದ ಸೇರುವ ಪರಂಪರೆಯನ್ನು ಹೊಂದಿದ್ದೇವೆ. ಇದು ಉದ್ಯೋಗವಲ್ಲ, ಇದೊಂದು ಜೀವಮಾನ ಬದ್ಧತೆ. ಇದಕ್ಕೆ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ಆದರೆ ಈ ಯೋಜನೆ ಮೂಲಕ ಇದನ್ನು ಗುತ್ತಿಗೆ ಕೆಲಸವಾಗಿ ಸೀಮಿತಗೊಳಿಸಲಾಗುತ್ತಿದೆ. ಇದು ದೇಶದ ಯುವಕರಿಗೆ ಕೇಂದ್ರ ಸರ್ಕಾರ ಮಾಡಬಹುದಾದ ಅತಿ ದೊಡ್ಡ ಅಪಮಾನ ಎಂದು ಅವರು ಹೇಳಿದರು.

- Advertisement -

ಇಂದು ದೇಶ ಚೀನಾದಿಂದ ನಿರಂತದ ಸವಾಲು ಎದುರಿಸುತ್ತಿದ್ದು, ಪಶ್ಚಿಮ ಗಡಿಭಾಗದಲ್ಲೂ ಸಮಸ್ಯೆ ಎದುರಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಸೇನೆಯ ಸಾಮರ್ಥ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದು ವೇತನ ಹಾಗೂ ಪಿಂಚಣಿ ಬಿಲ್ ಗಳು ರಕ್ಷಣಾ ಬಜೆಟ್ ನ ಶೇ.54ರಷ್ಟಿದೆ. ಈ ಆರ್ಥಿಕ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ಈ ಆರ್ಥಿಕ ಹೊರೆಯನ್ನು ಇಳಿಸಲು ಸೇನಾ ನೇಮಕಾತಿಯಲ್ಲಿ ಬದಲಾವಣೆ ತರಲು ಮುಂದಾಗಿರುವುದು ಸರಿಯಲ್ಲ. ಜವಾಬ್ದಾರಿಯುತ ಸರ್ಕಾರವಾಗಿ ಸೇನೆಗೆ ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು ಸೇರಿಸುವತ್ತ ಗಮನಹರಿಸಬೇಕು. ಹೀಗಾಗಿ ಈ ಯೋಜನೆ ಹಿಂಪಡೆಯಬೇಕು ಎಂದು ಪಲ್ಲಂ ರಾಜು ಆಗ್ರಹಿಸಿದರು.

Join Whatsapp