ರಾಮನಗರ: ಕೇಂದ್ರ ಸರ್ಕಾರ ಜಾರಿಗೆ ತಂದ ಅಗ್ನಿಪಥ ಯೋಜನೆಯ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದ ಬೆನ್ನಲ್ಲೇ , ಇದೀಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅಗ್ನಿಪಥ ಯೋಜನೆಯು ಆರೆಸ್ಸೆಸ್ ಕೂಸು ಎಂದು ಟೀಕಿಸಿದ್ದಾರೆ.
ಚನ್ನಪಟ್ಟಣದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಯಾರು ಸಲಹೆ ನೀಡಿದರೋ ಗೊತ್ತಿಲ್ಲ. ಸಂಸತ್ ನಲ್ಲಿ ಎಂದೂ ಈ ಬಗ್ಗೆ ಚರ್ಚೆ ನಡೆದಿಲ್ಲ. ಹೊಸತಾಗಿ 10 ಲಕ್ಷ ಸೈನಿಕರನ್ನು ಆಯ್ಕೆ ಮಾಡಿ 4 ವರ್ಷದಲ್ಲಿ ಶೇ 75ರಷ್ಟು ಜನರನ್ನು ಸೇನೆಯಿಂದ ಹೊರಗೆ ಕಳುಹಿಸುತ್ತಾರೆ. ಹಾಗಾದರೆ ನಂತರದಲ್ಲಿ ಅವರ ಪಾಡೇನು? ಎಂದು ಪ್ರಶ್ನಿಸಿದರು.
ಕವಾಯತು ಮಾಡಿ ಕೆಲವರನ್ನು ಕಾರ್ಯಕರ್ತರೆಂದು ಇಟ್ಟುಕೊಂಡಿರುವ ಆರೆಸ್ಸೆಸ್ ಅವರೆಲ್ಲರನ್ನೂ ಈ ಮೂಲಕ ಸೇನೆಗೆ ಸೇರಿಸಲು ಸಂಚು ನಡೆಸಿದೆ. ಹೊಸತಾಗಿ ಆಯ್ಕೆ ಮಾಡುವ 10 ಲಕ್ಷ ಸೈನಿಕರ ಪೈಕಿ 2.5 ಲಕ್ಷ ಮಂದಿಯನ್ನು ಸೇನೆಯಲ್ಲಿಯೇ ಉಳಿಸಿಕೊಂಡು ಆ ಮೂಲಕ ಇಡೀ ಸೇನೆಯನ್ನು ಆರೆಸ್ಸೆಸ್ ಹಿಡಿತಕ್ಕೆ ತೆಗೆದುಕೊಳ್ಳುವುದು. ಉಳಿದ 7.5 ಲಕ್ಷ ಮಂದಿಯನ್ನು ದೇಶದೆಲ್ಲೆಡೆ ಕಳುಹಿಸಿ ಆ ಮೂಲಕ ಇಡೀ ದೇಶವನ್ನು ಆರೆಸ್ಸೆಸ್ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ಇದ್ದಂತೆ ಇದೆ. ಆರೆಸ್ಸೆಸ್ ಸಹ ನಾಜಿ ಕಾಲದಲ್ಲೇ ಆರಂಭ ಆಗಿದ್ದು, ಭಾರತದಲ್ಲೂ ನಾಜಿ ಆಡಳಿತ ತರಲು ಹೊರಟಂತೆ ಇದೆ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವು ಆಂತರಿಕ ವಿಚಾರಗಳಿಂದ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋತಿದೆ. ಆದರೆ ಇದಕ್ಕೂ ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಆಗಸ್ಟ್ 15ರಿಂದ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.