ಕಾಣೆಯಾದ ಮಗನಿಗಾಗಿ 17 ವರ್ಷ ಕಾದು ಕೊನೆಗೂ ಆತ್ಮಹತ್ಯೆಗೆ ಶರಣಾದ ತಂದೆ

Prasthutha|

►ಮಗನಿಗೆ ನಂಬರ್ ಗೊತ್ತು ಎಂದು ಲಾಂಡ್ ಲೈನ್ ಬದಲಿಸದ ಅಪ್ಪನಿಗೆ ಕೊನೆಗೂ ಕಾದಿತ್ತು ನಿರಾಸೆ

- Advertisement -

ಆಲಪ್ಪುಝ: ಮನೆಯ ಬಳಿಯ ಆಟದ ಮೈದಾನದಿಂದ  ಏಳು ವಯಸ್ಸಿನ ಮಗು ಕಾಣೆಯಾಗಿ 17 ವರ್ಷಗಳ ಕಾಲ ಕಾದು ಈಡೇರದ ಕನಸಿನೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾದ ಘಟನೆಯ ಕೇರಳದ ಆಲಪ್ಪುಝ ಜಿಲ್ಲೆಯಲ್ಲಿ ನಡೆದಿದೆ.

ರಾಜು ಮತ್ತು ಮಿನಿ ದಂಪತಿಯ ಏಳು ವಯಸ್ಸಿನ ಮಗು ರಾಹುಲ್, 2005ರ ಮೇ 18ರಂದು ನಾಪತ್ತೆಯಾಗಿತ್ತು. ಆಗ ಕುವೈಟ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜು ಮರುದಿನವೇ ಕೆಲಸ ತ್ಯಜಿಸಿ ಊರಿಗೆ ಬಂದು ಪಕ್ಕದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಕೇರಳ ಪೊಲೀಸರಿಗೆ ಈ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿರಲಿಲ್ಲ.  ಈ ಕೇಸನ್ನು ಸಿಬಿಐಗೆ ವರ್ಗಾಯಿಸಲಾಯಿತಾದರೂ ಯಾವುದೇ ಹಂತದ ಫಲಿತಾಂಶ ದೊರಕದ ಕಾರಣ  ಈ ಕೇಸನ್ನು ನ್ಯಾಯಾಲಯವು ಬಗೆಹರಿಸಲಾಗದ ಪ್ರಕರಣ ಎಂದು ಘೋಷಣೆ ಮಾಡಿತ್ತು.

- Advertisement -

17 ವರ್ಷ ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಂದೆ,  ಮಗನಿಗೆ ಮನೆಯ ದೂರವಾಣಿ ಸಂಖ್ಯೆ ತಿಳಿದಿದೆ ಎಂಬ ಒಂದೇ ಒಂದು ಕಾರಣಕ್ಕೆ ಮನೆಯ ಲಾಂಡ್ ಲೈನನ್ನೂ ಇಷ್ಟು ವರ್ಷಗಳ ಕಾಲ  ಬದಲಿಸದೇ ಪ್ರತಿ ದಿನ ಕರೆಗಾಗಿ ಕಾಯುತ್ತಿದ್ದರು. ಯಾವುದೇ ಕರೆ ಬಂದರೂ ಅದು ನನ್ನ ಮಗನದ್ದಾಗಿರಬಹುದು ಎಂದು ಓಡೋಡಿ ಬಂದು ಕರೆ ಸ್ವೀಕರಿಸುತ್ತಿದ್ದರು. ಆದರೆ ಪ್ರತಿ ಕರೆಯ ಬಳಿಕವೂ ಅವರ ನಿರಾಸೆ ಹೆಚ್ಚುತ್ತಲೇ ಹೋಗುತ್ತಿತ್ತು.

ಕುವೈಟ್ ನ ಕೆಲಸವನ್ನು ತ್ಯಜಿಸಿ , ಮಗನ ಭಾವಚಿತ್ರ ಹಿಡಿದುಕೊಂಡು ಐದು ವರ್ಷಗಳ ಕಾಲ ಕೇರಳದ ಮೂಲೆ ಮೂಲೆಗಳಿಗೂ   ಭೇಟಿ ನೀಡಿದ ರಾಜು ಪ್ರಯತ್ನ ಫಲಕಾರಿಯಾಗದೆ ಮರಳಿ ಕುವೈಟ್ ಗೆ ತೆರಳಿದ್ದರು.

ಈ ಮಧ್ಯೆ ಕೇರಳದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ನಡೆದಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಸಿಬಿಐ ಪೊಲೀಸರು 2009 ರಲ್ಲಿ ಸಿಬಿಐ ಕೃಷ್ಣ ಪಿಳ್ಳೈ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ತಾನು ಈ ಹಿಂದೆ ರಾಹುಲ್ ಎಂಬ ಬಾಲಕನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಳ್ಳುತ್ತಾನೆ. ಇದರಿಂದ ರಾಹುಲ್ ಪ್ರಕರಣ ಮತ್ತೊಮ್ಮೆ ಹೊಸ ತಿರುವುಪಡೆದುಕೊಂಡಿತ್ತು.

ಬಾಲಕನ ಮೃತದೇಹವನ್ನು ಅಲಪ್ಪುಳ ಮುನ್ಸಿಪಲ್ ಪ್ರದೇಶದ ಜೌಗು ಭೂಮಿಯಲ್ಲಿ ಹೂತಿರುವುದಾಗಿ ಪಿಳ್ಳೈ ವಿಚಾರಣೆಯ ಸಮಯದಲ್ಲಿ ಮಾಹಿತಿ ನೀಡಿದ್ದ. ಆದರೆ ಆ ಪ್ರದೇಶದಲ್ಲಿ ಸಂಪೂರ್ಣ ಶೋಧ ನಡೆಸಿದಾಗ ಅಲ್ಲಿ ಯಾವುದೇ ಕುರುಹು ಕೂಡ ಪತ್ತೆಯಾಗಿರಲಿಲ್ಲ.

ಪೊಲೀಸ್ , ನ್ಯಾಯಾಲಯ ಸಂಪೂರ್ಣವಾಗಿ ಪ್ರಕರಣವನ್ನೂ ಕೈಬಿಟ್ಟಿದ್ದರೂ ಮಗನ ಬರುವಿಕೆಗಾಗಿ ಬರೋಬ್ಬರಿ 17 ವರ್ಷಗಳ ಕಾಲ ಕಾದು ಕುಳಿತ ತಂದೆ ಕೊನೆಗೂ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.



Join Whatsapp