ಹೈದರಾಬಾದ್: ಪತಿಯ ಕಿರುಕುಳದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಘಟನೆ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆಯಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಅದರ ಬೆನ್ನಲ್ಲೇ ಆಕೆಯ ಪತಿಯನ್ನು ಹೊಡೆದು ಕೊಲೆ ಮಾಡಲಾಗಿದೆ. ಮಗಳ ದಾರುಣ ಅಂತ್ಯಕ್ಕೆ ಆಕೆಯ ಪತಿಯೇ ಕಾರಣ ಎಂದು ಮೃತಳ ಕುಟುಂಬಸ್ಥರು, ಸಂಬಂಧಿಕರು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಸಿಂಧು ಮತ್ತು ನಾಗಾರ್ಜುನ ಪ್ರೀತಿಸಿ ಮದುವೆಯಾಗಿರುವ ದಂಪತಿ. ಅವರ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಸಿಂಧು ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆಗಾಗಿ ನಾಗರ್ ಕರ್ನೂಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ವೈದ್ಯರು ಸೂಚನೆಯಂತೆ ಹೈದರಾಬಾದ್‌ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಿಂಧು ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಸಿಂಧು ಸಾವಿನ ವಿಷಯ ತಿಳಿದ ಕುಟುಂಬಸ್ಥರು ಸಿಂಧು ಪತಿ ನಾಗಾರ್ಜುನ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಸಿಂಧು ನಿನ್ನಿಂದಲೇ ಸತ್ತಿದ್ದಾಳೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ನಾಗಾರ್ಜುನನನ್ನು ಆಮನಗಲ್‌ನಲ್ಲಿ ಕಬ್ಬಿಣದ ಸರಳು ಮತ್ತು ದೊಣ್ಣೆಗಳಿಂದ ಮಧ್ಯರಾತ್ರಿ ವೇಳೆ ಥಳಿಸಿದ್ದಾರೆ. ನಾಗಾರ್ಜುನ ಮೃತಪಟ್ಟಿದ್ದು, ಆತನ ದೇಹ ಕಲ್ವಕುರ್ತಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ನಾಗಾರ್ಜುನ್ ವರದಕ್ಷಿಣೆಗಾಗಿ ಪತ್ನಿ ಸಿಂಧುಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಂಧು ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆಯಾದಾಗಿನಿಂದಲೂ ತನ್ನ ಮಗಳು ಹಲವಾರು ನಿರ್ಬಂಧಗಳು ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದಳು. ತನ್ನ ಮಗುವಿನ ಸಾವಿಗೆ ಪತಿಯ ಸಂಬಂಧಿಕ ಡಾ. ಕೃಷ್ಣ ಹಾಗೂ ಆತನ ಪತ್ನಿಯೇ ಕಾರಣ ಎಂದು ಸಿಂಧು ತಾಯಿ ಆರೋಪ ಮಾಡಿದ್ದಾರೆ.