ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಬಳಿಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಪೆಟ್ರೋಲ್ ಬಳಿಕ ಇದೀಗ ರೂಪಾಯಿ ಮೌಲ್ಯ 100 ರ ಗಡಿ ದಾಟಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ಪ್ರತಿ ಡಾಲರ್ ಗೆ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪ್ರಧಾನಿ ಅವರು ಈಗಾಗಲೇ ಪೆಟ್ರೋಲ್, ಡೀಸೆಲ್ ಗೆ 100 + ಮತ್ತು ಎಲ್.ಪಿ.ಜಿ ಗೆ 1000 ರ ಗುರಿಯನ್ನು ಸಾಧಿಸಿ ತೋರಿಸಿದ್ದಾರೆ. ಇದೀಗ ರೂಪಾಯಿ 100 ರ ಕಡೆಗೆ ಮುಖ ಮಾಡಲು ಸರದಿಯಲ್ಲಿದೆ ಎಂದು ಕಿಡಿಕಾರಿದ್ದಾರೆ.
ಸದ್ಯ ಭಾರತವು ಆರ್ಥಿಕ ಬಿಕ್ಕಟ್ಟಿನ ಮಧ್ಯ ಭಾಗದಲ್ಲಿದ್ದು, ಅದು ಮತ್ತಷ್ಟು ಹದಗೆಡುತ್ತದೆ. ಮೋದಿ ಸರ್ಕಾರ ಭಾರತವನ್ನು ಹಿಂದೆಂದೂ ಕಂಡಿರದ ಕೆಟ್ಟ ಆರ್ಥಿಕ ಸಂಕಷ್ಟಕ್ಕೆ ತಳ್ಳಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಮಾತನಾಡಿ, ಭಾರತೀಯ ರೂಪಾಯಿ ಡಾಲರ್ ಗೆ 77.41 ರೂ. ಗೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅಭೂತಪೂರ್ವವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕಳೆದ 75 ವರ್ಷಗಳಲ್ಲಿ ಎಂದಿಗೂ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿ ಭಾರತದಲ್ಲಿದೆ. ಮೋದಿ ಸರ್ಕಾರದ ಅಡಿಯಲ್ಲಿ ಭಾರತೀಯ ರೂಪಾಯಿ ಐಸಿಯು ತಲುಪಿದ್ದು, ಇದಕ್ಕೆ ಕಾರಣಗಳೇನು ಎಂದು ಅವರು ಪ್ರಶ್ನಿಸಿದ್ದಾರೆ.