►ಕೈ ಪಾಳಯದಿಂದ ಪ್ರಶ್ನೆಗಳ ಸುರಿಮಳೆ: ಬೊಮ್ಮಾಯಿ, ಧಮ್ಮ್ ಇದ್ದರೆ ಉತ್ತರಿಸಿ ಎಂದ ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ನಡೆಸಿದ ಪೇ ಸಿಎಂ ಅಭಿಯಾನ ರಾಜ್ಯಾದ್ಯಂತ ಸದ್ದು ಮಾಡಿದ ಬಳಿಕ ಕಾಂಗ್ರೆಸ್ ಪಕ್ಷವು ‘ಸೇ ಸಿಎಂ’ ಎಂಬ ಹೊಸ ಅಭಿಯಾನ ಮಾಡಲು ತಯಾರಿ ಮಾಡಿಕೊಂಡಿದ್ದು, ಪ್ರಶ್ನೆಗಳ ಸುರಿಮಳೆ ಗೈಯ್ಯುತ್ತಿದೆ.
ಈಗಾಗಲೇ ಬಿಜೆಪಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಸರ್ಕಾರಕ್ಕೆ ಒಂದೊಂದೇ ಪ್ರಶ್ನೆಗಳನ್ನು ಕಾಂಗ್ರೆಸ್ ಕೇಳುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ, ಸೇ ಸಿಎಂ ಅಭಿಯಾನ ಮಾಡುವುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವ ಪಕ್ಷದ ನಾಯಕರು? ಎಂದು ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಪ್ರಶ್ನೆ ಕೇಳಿದೆ. ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಹೇಳಿದ್ದಾರೆ. ಹಾಗಾದ್ರೆ ಯತ್ನಾಳ್ ಯಾವ ಪಕ್ಷದ ನಾಯಕರು? ಯತ್ನಾಳರನ್ನು ಉಚ್ಛಾಟನೆ ಮಾಡುವಿರಾ? ಅವರು ಶಾಸಕರು ಅಷ್ಟೇ ಎಂದಿದ್ದಾರೆ ಅರುಣ್ ಸಿಂಗ್. ಹಾಗಿದ್ರೆ ಬಿಜೆಪಿಗೆ ಶಾಸಕರೆಂದರೆ ಕೇವಲವೇ? ಯತ್ನಾಳರನ್ನು ನಿಯಂತ್ರಿಸಲಾಗದಷ್ಟು ರಾಜ್ಯ ಬಿಜೆಪಿ ಅಸಹಾಯಕವಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬಿಜೆಪಿ ಸರ್ಕಾರದ್ದು 90% ವಚನ ವಂಚನೆ, 40% ಕಮಿಷನ್ ಲೂಟಿ 100% ನೈತಿಕ ಅಧಃಪತನ. ಅಂಗೈಯಲ್ಲಿ ಆಕಾಶ ತೋರಿಸುವ ಭರವಸೆಗಳನ್ನು ನೀಡಿ, ಅದರಲ್ಲಿ 90% ಕೂಡ ಈಡೇರಿಸದ ಸರ್ಕಾರ ಈಗ ತಮ್ಮದೇ ಪ್ರಣಾಳಿಕೆ ಬಗ್ಗೆ ಮೌನವಾಗಿದೆ. ಸಿಎಂ ಬೊಮ್ಮಾಯಿ ಅವರೇ ನಿಮಗೆ ದಮ್ಮು, ತಾಕತ್ತಿದ್ದರೆ ಪ್ರಣಾಳಿಕೆಯ ಚರ್ಚೆಗೆ ಸಿದ್ದವೇ ಎಂದು ಬೊಮ್ಮಾಯಿ ದಾಟಿಯಲ್ಲೇ ಕಾಂಗ್ರೆಸ್ ಸವಾಲು ಹಾಕಿದೆ.