ಬೆಂಗಳೂರು: ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿ ತೊರೆದು ವಾಪಸ್ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸದ್ದು ಗದ್ದಲ ಜೋರಾಗಿದೆ. ಇದರ ಮಧ್ಯೆ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಬಿಎಂಪಿಯಿಂದ ಭರಪೂರ ಅನುದಾನ ನೀಡಲಾಗಿದೆ.
ದಾಸರಹಳ್ಳಿ, ಯಲಹಂಕ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗಿದೆ. ಆದ್ರೆ, ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರಕ್ಕೆ ಭರಪೂರ ಅನುದಾನ ಬಿಡುಗಡೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ 7.63 ಕೋಟಿ ರೂ. ಅನುದಾನ ನೀಡಲಾಗಿದೆ.
ಹೇರೋಹಳ್ಳಿ ಹಾಗೂ ಕೆಂಗೇರಿ ಭಾಗಕ್ಕೆ ಕುಡಿಯುವ ನೀರಿಗಾಗಿ ಅನುದಾನ ನೀಡಲಾಗಿದೆ. 1.63 ಕೋಟಿ ರೂ. ನೀರು ಪೂರೈಸುವ ಟ್ಯಾಂಕರ್ಗಳಿಗೆ ಮೀಸಲಿಡಲಾಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು 4 ಕೋಟಿ ರೂ. ಹಾಗೂ ನಿರ್ವಹಣೆ ಮಾಡಲು 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸೇರ್ಪಡೆ ಚರ್ಚೆ ಬೆನ್ನಲ್ಲೇ ಸೋಮಶೇಖರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮಂಜೂರು ಮಾಡಿರುವುದು ಭಾರೀ ಚರ್ಚೆಗೆ ಹಾಗೂ ಕುತೂಹಲ ಮೂಡಿಸಿದೆ.