ನಾಗೇಶ್ ಶಿಕ್ಷಣ ಸಚಿವರಾದ ಬಳಿಕ ಇಲಾಖೆಯ ಎಲ್ಲಾ ವಿಚಾರಗಳಲ್ಲಿ ಅವಾಂತರ ಸೃಷ್ಟಿ: ರಮೇಶ್ ಬಾಬು

Prasthutha|

ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಆರು ವರ್ಷ ಪೂರ್ಣವಾಗಿರಬೇಕು ಎಂಬ ಹೊಸ ಆದೇಶವನ್ನು ಹೊರಡಿಸಿದೆ. ನಾಗೇಶ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ನಂತರ ಇಲಾಖೆಯ ಸಂಪೂರ್ಣ ಗೊಂದಲಮಯವಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ, ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ವಿಚಾರ, ಮೌಲ್ಯ ಮಾಪನ ಮಾಡುವವರಿಗೆ ಭತ್ಯೆ ವಿಚಾರ, ಶಿಕ್ಷಕರ ವರ್ಗಾವಣೆ ವಿಚಾರ, ಮಕ್ಕಳ ಬಿಸಿ ಊಟ ಹೊಟ್ಟೆ ವಿತರಣೆ ವಿಚಾರವಿರಬಹುದು ಎಲ್ಲಾ ವಿಚಾರಗಳಲ್ಲಿ ಅವಾಂತರಗಳನ್ನು ಸೃಷ್ಟಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು  ಟೀಕಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಕಳೆದ ಮೇ ತಿಂಗಳಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಘೋಷಿಸಿದ್ದು, ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯವಾಗಿದೆ. ಆದರೆ ಈಗ ಈ ಆದೇಶವನ್ನು ನೀಡಿದ್ದಾರೆ. ಈ ಆದೇಶ ಈ ವರ್ಷದಿಂದಲೇ ಜಾರಿಗೆ ಅಥವಾ ಮುಂದಿನ ವರ್ಷಕ್ಕೆ ಜಾರಿಯಾಗುವುದೇ ಎಂಬ ಸ್ಪಷ್ಟನೆ ನೀಡಿಲ್ಲ ಎಂದು ಅವರು ಆರೋಪಿಸಿದರು.

ಇಂತಹ ಗೊಂದಲಮಯ ಆದೇಶವನ್ನು ಯಾಕೆ ನೀಡಲಾಗಿದೆ ಎಂಬ ಮಾಹಿತಿಯು ಪ್ರಸ್ತಾಪವಾಗಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಾಲ್ಕು ವಿಭಾಗಗಳಲ್ಲಿ ವರ್ಗೀಕರಣ ಮಾಡಲಾಗಿದೆ. 1-5 ಪ್ರಾಥಮಿಕ ಶಿಕ್ಷಣ, 6-8 ಒಂದು ಹಂತ, 9-11 ಮತ್ತೊಂದು ಹಂತ ಹಾಗೂ ಪದವಿಯನ್ನು ನಾಲ್ಕು ವರ್ಷಗಳ ಕಾಲ ಮಾಡಲು ತೀರ್ಮಾನ ಮಾಡಲಾಗಿದೆ.  ಇಡೀ ದೇಶದಲ್ಲಿ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ವಯೋಮಿತಿ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.

- Advertisement -

ಪ್ರಸ್ತುತ ಇರುವ ಕಾನೂನು ಪ್ರಕಾರ ಐದು ವರ್ಷ ಐದು ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಈಗ ಕಲೆ ರಾಜ್ಯದಲ್ಲಿಡೆ ಸರ್ಕಾರಿ ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ ಕೇವಲ ಎರಡು ದಿನಗಳಲ್ಲಿ ಈ ವಿಚಾರವಾಗಿ ಆದೇಶ ಹೊರಡಿಸಲಾಗಿದೆ. ಯಾವುದೇ ವಿಮರ್ಶೆ ಮಾಡದೆ ಶಿಕ್ಷಕ ತಜ್ಞರ ಅಭಿಪ್ರಾಯ ಸಂಗ್ರಹಿಸದೆ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಪೋಷಕರು ಶಿಕ್ಷಕರು ಹಾಗೂ ಮಕ್ಕಳು ಗೊಂದಲಕ್ಕೀಡಾಗಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.

ಸರ್ಕಾರದ ಈ ಆದೇಶವನ್ನು ಹಾಗೂ ಶಿಕ್ಷಣ ಸಚಿವರ ನಡೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ. ಸರ್ಕಾರ ಇನ್ನಾದರೂ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಇನ್ನು ಸಚಿವ ಬಿ. ಸಿ. ನಾಗೇಶ್ ಅವರು ಕರ್ನಾಟಕ ಪರೀಕ್ಷಾ ಮಂಡಳಿಯ ಮೂಲಕ ಬೆಂಗಳೂರಿನ ಖಾಸಗಿ ಸಂಸ್ಥೆಯನ್ನು ಬಳಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗೆ ಶಿಕ್ಷಣ ಇಲಾಖೆಯಿಂದ ಹಣ ಪಾವತಿಸಲಾಗುತ್ತಿದೆ. ಸಚಿವರು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಈ ಸಂಸ್ಥೆಯನ್ನು ಬಳಸಿಕೊಂಡಿದ್ದಾರೆ ಯಾವುದೇ ಆಕ್ಷೇಪ ಇರುತ್ತಿರಲಿಲ್ಲ. ಆದರೆ ಇಲಾಖೆಯ ಹಣದಲ್ಲಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆ ಹಾಗೂ ಪಕ್ಷದ ವಿಚಾರಗಳನ್ನು ಹಂಚಲು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಈ ಸಂಬಂಧ ರಾಜ್ಯ ಸರ್ಕಾರ ತನಿಖೆ ನಡೆಸಿ ಸಚಿವರಿಂದ ಸಂಬಂಧಪಟ್ಟ ಹಣವನ್ನು ಹಿಂಪಡೆಯಬೇಕು ಎಂದು ಪಕ್ಷದ ಪರವಾಗಿ ಒತ್ತಾಯಿಸುತ್ತೇನೆ ಎಂದು ರಮೇಶ್ ಬಾಬು ಹೇಳಿದರು.



Join Whatsapp