ಕೊಡಗು: ಮಂಗಳೂರಿನಲ್ಲಿ ಕಾರ್ಯಕರ್ತರಿಗೆ ಬಹಿರಂಗವಾಗಿ ತ್ರಿಶೂಲ ವಿತರಿಸಿ ವಿವಾದ ಸೃಷ್ಟಿಸಿದ್ದ ವಿಶ್ವ ಹಿಂದೂ ಪರಿಷತ್- ಬಜರಂಗದಳ ಇದೀಗ ಕೊಡಗಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮತ್ತೆ ತನ್ನ ಕಾರ್ಯಕರ್ತರಿಗೆ ಬಹಿರಂಗವಾಗಿ ಶಸ್ತ್ರಾಸ್ತ್ರ ವಿತರಣೆ ನಡೆಸಿದೆ. ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದ ಬಜರಂಗದಳ ಶೌರ್ಯ ಪ್ರಶಿಕ್ಷಣ ವರ್ಗ ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ವಿತರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಜರಂಗದಳದ ವತಿಯಿಂದ ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಏರ್ಪಡಿಸಿದ್ದ ಶೌರ್ಯ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ. ಈ ಕುರಿತು ಸ್ವತಹ ಫೇಸ್ಬುಕ್ ನಲ್ಲಿ ಫೋಟೋ ಹಂಚಿರುವ ಬಜರಂಗದಳದ ಕಾರ್ಯಕರ್ತ ಅರುನ್ ತೇಜ್ ಎಂಬಾತ, ನಾಯಕರೊಬ್ಬರು ಆತನಿಗೆ ಚಾಕೊಂದನ್ನು ನೀಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾನೆ.
ಕಾರ್ಯಕರ್ತರಿಗೆ ಮಾರಕ ಆಯುಧಗಳನ್ನು ಹಂಚಿರುವ ಘಟನೆ ಈ ಹಿಂದೆ ಮಂಗಳೂರಿನಲ್ಲಿಯೂ ನಡೆದಿತ್ತು. ಕಳೆದ ಬಾರಿಯ ಆಯುಧ ಪೂಜೆಯಂದು ಬಜರಂಗದಳ ತನ್ನ ಕಾರ್ಯಕರ್ತರಿಗೆ ತ್ರಿಶೂಲ ಹಂಚಿಕೆ ನಡೆಸಿ ಕರಾವಳಿಗರ ಆಕ್ರೋಶಕ್ಕೆ ತುತ್ತಾಗಿತ್ತು. ಇದೀಗ ಮತ್ತೆ ಆಯುಧ ಹಂಚಿ ವಿವಾದಕ್ಕೀಡಾಗಿರುವ ಬಜರಂಗದಳ, ಶಾಂತಿಯಿಂದ ಇರುವ ನಾಡಿನಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ಪೂರೈಕೆ ನಡೆಸಿ ಏನನ್ನು ಸಾಧಿಸಲು ಹೊರಟಿವೆ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.