ತಂದೆಯ ಬಳಿಕ ಪ್ಯಾಲೆಸ್ತೀನ್ ಹೋರಾಟಗಾರ್ತಿ ಅಹೆದ್ ತಾಮಿಮಿಯನ್ನೂ ಬಂಧಿಸಿದ ಇಸ್ರೇಲ್ ಸೇನೆ

Prasthutha|

ಚೆರುಸಲೇಂ: ಪ್ಯಾಲೆಸ್ತೀನ್‌ನ ಮಾನವಹಕ್ಕುಗಳ ಹೋರಾಟಗಾರ್ತಿ 22 ವರ್ಷ ವಯಸ್ಸಿನ ಅಹೆದ್ ತಾಮಿಮಿಯನ್ನು ಇಸ್ರೇಲಿ ಸೇನೆ ಬಂಧಿಸಿದೆ. ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಈ ಬಂಧನ ನಡೆದಿದೆ.

- Advertisement -

ತಾಮಿಮಿ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಸಾರ ಮಾಡಿದ ಪೋಸ್ಟ್ ಒಂದರಲ್ಲಿ ಹಿಟ್ಲರ್‌ನನ್ನು ಉಲ್ಲೇಖಿಸಿ ಪ್ರಚೋದನಕಾರಿ ಪದಗಳೊಂದಿಗೆ ಇಸ್ರೇಲಿಗರ ಹತ್ಯಾಕಾಂಡಕ್ಕೆ ಕರೆ ನೀಡಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಹೆದ್ ತಾಮಿಮಿ ಅವರನ್ನು ಬಂಧಿಸಲಾಗಿದೆ ಎಂದು ಇಸ್ರೇಲಿ ಸೇನಾ ವಕ್ತಾರ ತಿಳಿಸಿದ್ದಾರೆ ಎನ್ನಲಾಗಿದೆ.

ಅಹೆದ್ ತಾಮಿಮಿಯ ತಂದೆ ಬಾಸ್ಸೆಮ್ ಅಲ್ ತಾಮಿಮಿಯನ್ನು ಕೂಡಾ ಇಸ್ರೇಲ್ ಸೇನೆ ಅ.20ರಂದು ಬಂಧಿಸಿತ್ತು. ಆವಾಗಿನಿಂದ ತನ್ನ ಪತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು ಅಹೆದ್ ತಾಮಿಮಿಯ ತಾಯಿ ಸಾರಿಮನ್ ಅಲ್ ತಾಮಿಮಿ ತಿಳಿಸಿದ್ದಾರೆ.

- Advertisement -

ಮಗಳ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಸಾರಿಮನ್, ನನ್ನ ಮಗಳು ಇನ್‌ಸ್ಟಾಗ್ರಾಂನಲ್ಲಿ ಆ ಪೋಸ್ಟರನ್ನು ಬರೆದಿಲ್ಲ. ತಾಮಿಮಿಯ ಹೆಸರು ಹಾಗೂ ಭಾವಚಿತ್ರವಿರುವ ಹಲವಾರು ಇನ್‌ಸ್ಟಾಗ್ರಾಂ ಪೇಜ್‌ಗಳಿದ್ದು, ಅವುಗಳೊಂದಿಗೆ ಆಕೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.



Join Whatsapp