ಬಿಜೆಪಿ ಆಡಳಿತಕ್ಕೆ ಬಂದ ನಂತರ ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ: ಬಿ.ಕೆ.ಹರಿಪ್ರಸಾದ್

Prasthutha|

ಚಾಮರಾಜನಗರ: ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ನಂತರ ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಉತ್ತರ ಕರ್ನಾಟಕದ ಸಂಸದ ಕೇಂದ್ರದ ಮಾಜಿ ಮಂತ್ರಿ ನೇರವಾಗಿ ಹೇಳಿದ್ದಾರೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕೆ ಎಂದು. ಬಸವಣ್ಣನವರು, ಕುವೆಂಪು ಅವರು ಭಾವೈಕ್ಯತೆ, ಸೌಹಾರ್ದತೆಯನ್ನ ಸಾರಿದ ಪವಿತ್ರ ಭೂಮಿ ಇದು.ಇದರ ವಿರುದ್ಧ ಬಿಜೆಪಿಯವರು ನೇರವಾಗಿ ಸಂವಿಧಾನದ ಬುಡಕ್ಕೆ ಕೈ ಹಾಕಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.

- Advertisement -


ಚಾಮರಾಜನಗರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರ ಸೂತ್ರಧಾರರು ಮೋಹನ್ ಭಾಗವತರು 2015ರ ಬಿಹಾರ ಚುನಾವಣೆಯಲ್ಲಿ ಮೀಸಲಾತಿಯನ್ನು ತೆಗೆಯಬೇಕೆಂದು ಹೇಳಿಕೆ ನೀಡಿದ್ದರು. ಮೀಸಲಾತಿ ಕೇವಲ ನಿರುದ್ಯೋಗ, ಬಡತನ ನಿರ್ಮೂಲನೆ ಮಾಡುವ ಕಾರ್ಯಕ್ರಮವಲ್ಲ. ಮೀಸಲಾತಿ ಇರುವುದು ಎಲ್ಲರೂ ಸಮಾನವಾಗಿ ಬಾಳಬೇಕು ಎಂಬ ಆಶಯಕ್ಕಾಗಿ. ತಾರತಮ್ಯ ಇರಬೇಕು, ಬೇಧ ಭಾವ ಇರಬೇಕು, ಅಸಹಿಷ್ಣುತೆ ಇರಬೇಕು ಎಂದು ಬಿಜೆಪಿಯವರು ಸಂವಿಧಾನವನ್ನ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.


ಅತ್ಯಂತ ಹಿಂದುಳಿದ ಜಾತಿಯವರಾಗಲಿ, ಪರಿಶಿಷ್ಟ ಜಾತಿಯವರಾಗಲಿ ಇವತ್ತು ಐಎಎಸ್, ಐಪಿಎಸ್ ದೊಡ್ಡ ದೊಡ್ಡ ಹುದ್ದೆ ಪಡೆದಿರುವುದು ಸಂವಿಧಾನದ ಚೌಕಟ್ಟಿನಲ್ಲಿಯೇ ಹೊರತು, ಯಾರ ಮುಲಾಜಿನಿಂದಲ್ಲ. ರಾಜ್ಯದ ಖಜಾನೆ ತುಂಬುವವರು ಬಡವರು, ಹಿಂದುಳಿದವರು ತಮ್ಮ ರಕ್ತ, ಬೆವರನ್ನ ಸುರಿಸಿ ಬೆಂಗಳೂರಿನ ಖಜಾನೆ ತುಂಬುತ್ತಿದ್ದಾರೆ. ಜಿಎಸ್ಟಿ ಬಂದ ಮೇಲೆ ಭಿಕ್ಷುಕನೂ ತೆರಿಗೆ ಕಟ್ಟುತ್ತಿದ್ದಾರೆ. ಈ ಹಣವನ್ನು ಹೇಗೆ ಜನರ ಕಲ್ಯಾಣಕ್ಕಾಗಿ ಯೋಜನೆ ತರಬೇಕು ಎಂಬ ನಿಟ್ಟಿನಲ್ಲಿ ತಾವು ಐದು ವರ್ಷಕ್ಕೊಮ್ಮೆ ಆರಿಸಿ ಕಳಸ್ತೀರಿ. ತಮ್ಮ ಮಕ್ಕಳ ಭವಿಷ್ಯ ಉಜ್ವಲ ಆಗಿರಬೇಕು ಎಂಬ ಕಾರಣಕ್ಕೆ ಜವಾಬ್ದಾರಿಯಿಂದ ಆರಿಸಿ ಕಳ್ಸಿದಿರಿ. ಆದರೆ ಬಿಜೆಪಿ ಪಕ್ಷ ಮಾಡಿರುವುದೇನು ಎಂಬುದನ್ನ ಕೇಳಬೇಕಿದೆ ಎಂದು ಹರಿಪ್ರಸಾದ್ ತಿಳಿಸಿದರು.

- Advertisement -


ಈ ಜಿಲ್ಲೆಯಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಹೇಳಿ, ಮಾಯಾವತಿ, ಕಾನ್ಶಿರಾಂ ಅವರ ಹೆಸರನ್ನು ಹೇಳಿ ಗೆದ್ದು ಅಧಿಕಾರದ ಆಸೆಗಾಗಿ ಎಲ್ಲವನ್ನೂ ಮಾರಿಕೊಂಡು ಬಿಜೆಪಿಗೆ ಸೇರಿದ್ದಾರೆ. ಈ ಆರ್ ಎಸ್ ಎಸ್ ಅವ್ರು ಮಾತಾಡುವುದು ಅಂಬೇಡ್ಕರ್ ಬಗ್ಗೆ ಆದ್ರೆ ಕೆಲಸ ಮಾಡೋದು ಸಾವರ್ಕರ್ ಬಗ್ಗೆ. ಜಾತಿವಾದ, ಭೇದಭಾವಕ್ಕೆ ಒತ್ತು ಕೊಡುವ ಹಿಂದುತ್ವದ ಪ್ರತಿಪಾದಕರು ಸಾವರ್ಕರ್. ಮಹಾತ್ಮ ಗಾಂಧಿ, ವಿವೇಕಾನಂದರ ಹಿಂದುತ್ವ ಭೇಧಭಾವದ ವಿರುದ್ಧ ಇದೆ ಎಂದು ಹೇಳಿದರು.


ಬಿಜೆಪಿಯ ಅಧ್ಯಕ್ಷರ ಭಾಷಣ ಕೇಳಿದರೆ ಅವರಿಗೆ ನೀರು, ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಕೇಳಬಾರದಂತೆ. ಲವ್ ಜಿಹಾದ್, ಘರ್ ವಾಪ್ಸಿ, ಹಲಾಲ್ ಬಗ್ಗೆ ಮಾತಾಡಬೇಕಂತೆ. ಅದೇ ನಮ್ಮ ಪಕ್ಷದ ಸೋನಿಯಾ ಗಾಂಧಿ ಅವರು ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದ್ದಾಗ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ತಂದು ಉದ್ಯೋಗ ಕೊಟ್ಟಿದ್ದಾರೆ. ಯಾರೂ ಕೂಡ ಹಸಿವಿನಿಂದ ಮಲಗಬಾರದೆಂದು ಆಹಾರ ಸಂರಕ್ಷಣಾ ಕಾಯ್ದೆಯನ್ನ ಜಾರಿ ಮಾಡಿದ್ರು. ಮಹಿಳೆಯರಿಗೆ ಹೆಲ್ತ್ ಮಿಷನ್ ಜಾರಿ ಮಾಡಿದ್ರು, ಪ್ರತಿಯೊಬ್ಬರ ಮಕ್ಕಳು ಶಿಕ್ಷಣ ಕಲಿಯಬೇಕೆಂಬ ಆಶಯದಿಂದ ಸರ್ವ ಶಿಕ್ಷಣ ಅಭಿಯಾನವನ್ನ ಜಾರಿ ಮಾಡಿದ್ರು, ಆರ್ ಟಿ ಐಯನ್ನು ಕೂಡ ತಂದಿದ್ದು ಕಾಂಗ್ರೆಸ್ ಸರ್ಕಾರ. ಈ ಯೋಜನೆಗಳು ಕೇವಲ ಕಾರ್ಯಕ್ರಮವಲ್ಲ ಇವೆಲ್ಲವೂ ಕಾನೂನು. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪನವರು, ಬೊಮ್ಮಾಯಿಯವರ ಅಧಿಕಾರದಲ್ಲಿ ಬಡವರಿಗೆ ಯಾವ ಕಾರ್ಯಕ್ರಮ ಮಾಡಿದ್ದಾರೆ ಬಹಿರಂಗವಾಗಿ ಹೇಳಲಿ. ಬಡವರ ಮಕ್ಕಳು ಓದುವ ಸ್ಕಾಲರ್ಶಿಪ್ ಕೂಡ ನಿಲ್ಲಿಸಿದ್ದಾರೆ. ಅದರ ಬದಲಾಗಿ ಬಲಾಢ್ಯರಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ನಮಗೆ ಅಭ್ಯಂತರ ಇಲ್ಲ ಕೊಡಲಿ. ಆದ್ರೆ ರಾಜ್ಯದ ಬೊಕ್ಕಸಕ್ಕೆ ಬಡವರ ಪಾಲಿದೆ ಅವರನ್ನ ಹಕ್ಕನ್ನ ಮೊದಲು ಕೊಡಲಿ.


ಶಿವಮೊಗ್ಗದಲ್ಲಿ ಒಬ್ಬ ಭಯೋತ್ಪಾದಕಿ ಬಂದು ಮನೆಯಲ್ಲಿರುವ ಕತ್ತಿ, ಚಾಕು ಚೂರಿಗಳನ್ನ ಸಾಣೇ ಹಿಡಿಯಬೇಕೆಂದು ಕರೆ ಕೊಡ್ತಾರೆ. ಚಾಮರಾಜನಗರ ಜಿಲ್ಲೆ ವಿದ್ಯಾವಂತರಿದ್ದೀರಿ ಯೋಚನೆ ಮಾಡಿ. ನಿಮ್ಮ ಮಕ್ಕಳ ಕೈಯಲ್ಲಿ ಪೆನ್ನು, ಪುಸ್ತಕ ಕೊಟ್ಟು ಇಂಜಿನಿಯರ್ , ಡಾಕ್ಟರ್ ಮಾಡ್ತೀರಾ ಅಥವಾ ಬಿಜೆಪಿ ಅಧ್ಯಕ್ಷರ ಮಾತುಗಳನ್ನ ಕೇಳಿ ನಿಮ್ಮ ಮಕ್ಕಳು ಭಯೋತ್ಪಾದಕರಾಗಬೇಕಾ, ಪ್ರಜ್ಞಾವಂತರಾಗಬೇಕಾ ನೀವೇ ನಿರ್ಧಾರ ಮಾಡಿ ಮುಂದಿನ ಚುನಾವಣೆಯಲ್ಲಿ ಮತ ಹಾಕಿ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಕೊರೊನಾದಲ್ಲಿ ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ 35 ಜನರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ರು. ಆಗ ನಾವೆಲ್ಲ ಭಾಗವಹಿಸಿದ್ವಿ ಅವರ ಕತೆಗಳನ್ನ ಕೇಳಿ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಬರ್ತಿತ್ತು. ಅವರ ನೋವನ್ನ ಕೇಳಲು ಈ ಬಿಜೆಪಿಯವರು ಬರಲೇ ಇಲ್ಲ. ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕಾಂಗ್ರೆಸ್ ಪಕ್ಷವನ್ನ ನೀವು ಗೆಲ್ಲಿಸಬೇಕಿದೆ.
ನಿಮ್ಮ ಜಿಲ್ಲೆಯ ಭವಿಷ್ಯ, ನಿಮ್ಮ ಕುಟುಂಬದ ಭವಿಷ್ಯ, ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಲಿದೆ. ನೀವು ನಿರ್ಧಾರ ಮಾಡಿ ಮತಾಂಧರಿಗೆ, ಸಂವಿಧಾನವನ್ನ ಬದಲಾಯಿಸುವ ಪಕ್ಷಕ್ಕೆ, ಮೂಢನಂಬಿಕೆ ಬಿತ್ತುವವರಿಗೆ ಓಟು ಕೊಡಬೇಕಾ ಅಭಿವೃದ್ಧಿ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಓಟು ಕೊಡಬೇಕಾ ಎಂದು ಯೋಚನೆ ಮಾಡಿ ಎಂದು ಹರಿಪ್ರಸಾದ್ ಹೇಳಿದರು.



Join Whatsapp