ವಡೋದರಾ: ವಿವಾಹವಾಗಿ ಎಂಟು ವರ್ಷಗಳ ಬಳಿಕ 40 ವರ್ಷದ ಮಹಿಳೆಯೊಬ್ಬರಿಗೆ ತನ್ನ ಪತಿ ವಾಸ್ತವವಾಗಿ ಮಹಿಳೆಯಾಗಿದ್ದಾಳೆ ಎಂಬ ಆಘಾತಕಾರಿ ಸತ್ಯ ಅರಿವಾದ ಪ್ರಕರಣ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.
2014ರಲ್ಲಿ ತಾನು ಮದುವೆಯಾದ ವ್ಯಕ್ತಿಯು ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದನ್ನು ತನ್ನಿಂದ ಮರೆಮಾಚಿದ್ದಾನೆ ಎಂದು ಶೀತಲ್ ಎಂಬ ಮಹಿಳೆ ಬುಧವಾರ ಗೋತ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ದೂರಿನಲ್ಲಿ ಶೀತಲ್ , ಪತಿ ವಿರಾಜ್ ವರ್ಧನ್ (ಈ ಮೊದಲು ವಿಜೈತಾ ಆಗಿದ್ದರು) ವಿರುದ್ಧ ವಂಚನೆ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪ ಹೊರಿಸಿರುವುದಲ್ಲದೆ, ಪತಿಯ ಕುಟುಂಬದವರ ವಿರುದ್ಧವೂ ಎಫ್ ಐಆರ್ ದಾಖಲಿಸಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ವೈವಾಹಿಕ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಒಂದರ ಮೂಲಕ ವಿರಾಜ್ ವರ್ಧನ್ ನನ್ನು ಶೀತಲ್ ಸಂಪರ್ಕಿಸಿದ್ದರು. ಶೀತಲ್ ಅವರ ಮಾಜಿ ಪತಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ಬಳಿಕ 14 ವರ್ಷದ ಮಗಳನ್ನು ಸಾಕುವ ಹೊಣೆ ಶೀತಲ್ ಮೇಲೆ ಬಿದ್ದಿತ್ತು. 2014ರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇವರ ವಿವಾಹವಾಗಿತ್ತು. ಆದರೆ, ಆ ವ್ಯಕ್ತಿ ಒಂದಲ್ಲ ಒಂದು ಕಾರಣಗಳನ್ನು ನೀಡಿ ಅನೇಕ ದಿನಗಳವರೆಗೆ ನೆಪಗಳನ್ನು ನೀಡುತ್ತ ಮದುವೆಯನ್ನು ಮುಂದೂಡುತ್ತಿದ್ದರು. ಮಹಿಳೆ ಆತನ ಮೇಲೆ ಒತ್ತಡ ಹೇರಿದಾಗ, ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿದ್ದಾಗ ತಾನು ಎದುರಿಸಿದ ಅಪಘಾತವೊಂದರ ಪರಿಣಾಮ ಲೈಂಗಿಕತೆಗೆ ಅಸಮರ್ಥ ಎಂದು ತಿಳಿಸಿದ್ದಾಗಿ ಮಹಿಳೆ ದೂರಿದ್ದಾರೆ ಎಂದು ಪೊಲೀಸರು ವಿವರ ನೀಡಿದ್ದಾರೆ.
ಸಣ್ಣ ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಾಗಿ ಆತ ಭರವಸೆ ನೀಡಿದ್ದ. ಆದರೆ ನಂತರ ವಿದೇಶದಲ್ಲಿದ್ದಾಗ ತಾನು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ಆತ ಸ್ಪಷ್ಟಪಡಿಸಿದ್ದಾನೆ. ಬಳಿಕ ಪತ್ನಿ ಜತೆ ಅಸಹಜ ಲೈಂಗಿಕತೆಗೆ ತೊಡಗಿದ್ದಲ್ಲದೆ, ಈ ಸತ್ಯವನ್ನು ಬಯಲುಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.