ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಮುಸ್ಲಿಮ್ ಬಳೆ ವ್ಯಾಪಾರಿಗೆ ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕನಿಗೆ ಮೂರು ತಿಂಗಳ ಬಳಿಕ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.
ಸಾಂಪ್ರದಾಯಿಕವಾಗಿ ಬಳೆ ವ್ಯಾಪಾರಿಯಾದ ತಸ್ಲೀಮ್ ಅಲಿ ಎಂಬಾತನಿಗೆ ಮಧ್ಯಪ್ರದೇಶ ಹೈಕೋರ್ಟ್ ಪೀಠ ಜಾಮೀನು ನೀಡಿದೆ ಎಂದು ಆರೋಪಿ ಪರ ವಕೀಲ ಇಹ್ತಿಶಾಮ್ ಹಶ್ಮಿ ತಿಳಿಸಿದ್ದಾರೆ.
ಈ ಹಿಂದೆ ಆಗಸ್ಟ್ 22 ರಂದು ಇಂದೋರ್ ನ ಬಂಗಂಗಾ ಎಂಬಲ್ಲಿ ಬಳೆ ವ್ಯಾಪಾರಿಯಾದ ತಸ್ಲೀಮ್ ಎಂಬಾತನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಅಮಾನುಷವಾಗಿ ಹಲ್ಲೆ ನಡೆಸಿದ ಬಳಿಕ ಪೊಲೀಸರಿಗೊಪ್ಪಿಸಲಾಗಿತ್ತು.
ಅಪ್ರಾಪ್ತ ಬಾಲಕಿಯ ತಂದೆ ರಾಕೇಶ್ ಪವಾರ್ ನೀಡಿದ್ದ ದೂರಿನನ್ವಯ ತಸ್ಲೀಮ್ ವಿರುದ್ಧ ಐಪಿಸಿ ಸೆಕ್ಷನ್ 354, 354 ಎ, 467, 468, 471, 420, 506 ಮತ್ತು ಪೋಕ್ಸೋ ಕಾಯ್ದೆಯ 7, 8 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಮಾತ್ರವಲ್ಲ ತಸ್ಲೀಮ್ ನೀಡಿದ್ದ ದೂರಿನ ಆಧಾರದಲ್ಲಿ ಬಾಲಕಿ ತಂದೆ ಪವಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.