ಕೇಸರಿ ಶಾಲು ಮುಂದಿಟ್ಟು ಸಂಘಪರಿವಾರದಿಂದ ಗಲಭೆಗೆ ಸಂಚು: ಅಫ್ಸರ್ ಕೊಡ್ಲಿಪೇಟೆ

Prasthutha|

ಬೆಂಗಳೂರು:  ಸ್ಕಾರ್ಫ್ ಧಾರಣೆಯನ್ನು ನೆಪವನ್ನಾಗಿಸಿಕೊಂಡು ಎ.ಬಿ.ವಿ.ಪಿ ಪ್ರೇರಿತ ಶಕ್ತಿಗಳು ಕರ್ನಾಟಕದಾದ್ಯಂತ ಹಲವು ಶಾಲಾ ಕಾಲೇಜುಗಳಲ್ಲಿ ದೊಂಬಿ, ಕಲ್ಲು ತೂರಾಟ ಮತ್ತಿತರ ಹಿಂಸೆಗಳನ್ನು ಮಾಡುವ ಮೂಲಕ ರಾಜ್ಯದ ಶಾಂತಿ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕದಡಲು ಪ್ರಯತ್ನ ಪಟ್ಟಿದ್ದು, ನಿನ್ನೆ ನಡೆದ ಘಟನೆಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು SDPI ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಸಿದ್ಧಾಂತಗಳನ್ನೊಳಗೊಂಡ ಈ ದೇಶದಲ್ಲಿ ಸಾಮರಸ್ಯ, ಸೌಹಾರ್ದತೆ, ಶಾಂತಿ, ಸಹೋದರತೆ ಮತ್ತು ಭಾವೈಕ್ಯತೆಗೆ  ಈ ದೇಶದ ಹಿಂದೂ – ಮುಸ್ಲಿಮರು ಅಪೂರ್ವ ಸಾಕ್ಷಿಯಾಗಿದ್ದರು. ಆದರೆ ಯಾವಾಗ ಈ ದೇಶಕ್ಕೆ ಆರೆಸ್ಸೆಸ್ ಪ್ರೇರಿತ ಶಕ್ತಿಗಳ ಹಸ್ತಕ್ಷೇಪ ಉಂಟಾಯಿತೋ ಅಂದಿನಿಂದ ಈ ಕ್ಷಣದವರೆಗೆ ಹಿಂದೂ ಮುಸ್ಲಿಮರ ಐಕ್ಯತೆಯನ್ನು ಒಡೆದು, ಸಂಘಪರಿವಾರ ಮತ್ತು ಬಿಜೆಪಿ ತನ್ನ ಸಂಘಟನಾ ಹಾಗೂ ರಾಜಕೀಯ  ಬೇಳೆ ಬೇಯಿಸುವಿಕೆಯ ಕರಾಳ ವ್ಯಾಪಕತೆಗೆ ನಾಂದಿ ಹಾಡುತ್ತಲೇ ಇದ್ದಾರೆ. ಹಿಂದುತ್ವ ಅಥವಾ ಮನುವಾದ ಅಥವಾ ಸಂಘಪರಿವಾರ ಅಂದರೆ ಅದು ವೈವಿಧ್ಯತೆಗೊಂದು ಅನ್ವರ್ಥನಾಮ ಇದ್ದಂತೆ. ವಿಶೇಷವಾಗಿ 2014ರಿಂದ ಮೋದಿ ನೇತೃತ್ವದ ಸರಕಾರ ಬಂದ ನಂತರ ದೇಶದಲ್ಲಿ ವಿಭಜನೆಯ ಕಿಚ್ಚು ವ್ಯಾಪಕವಾಗಿ ಉಲ್ಬಣಗೊಂಡು, ಜನರನ್ನು ಪರಸ್ಪರ ಕಚ್ಚಾಡಿಸುವುದರಲ್ಲೇ ನಿರತರಾಗಿದ್ದಾರೆ ಎಂದರು.

ಇದರ ಮುಂದುವರಿದ ಭಾಗವಾದ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಿಗೆ ಸ್ಕಾರ್ಫ್ ನಿಷೇಧವೆಂಬ ಕ್ಷುಲ್ಲಕ ವಿಚಾರವನ್ನು, ಸಂಘಪರಿವಾರವು  ಇಡುಗಂಟಾಗಿಸಿಕೊಂಡು,  ಹಿಂದೆಂದೂ ಕಾಣದ ಕೇಸರಿ ಶಾಲಿನ ಧಾರಣೆಯ ಮೂಲಕ ವಿದ್ಯಾರ್ಥಿಗಳನ್ನು ಛೂ ಬಿಟ್ಟು  ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡಿ, ವ್ಯವಸ್ಥಿತವಾದ ಗಲಭೆ ನಡೆಸಬೇಕೆನ್ನುವ ಪೂರ್ವಗ್ರಹ ಪೀಡಿತದ ಹುನ್ನಾರಕ್ಕೆ ಸಂಚು ರೂಪಿಸಿದೆ. ಮಾತ್ರವಲ್ಲ ರಾಜ್ಯ ಗೃಹ ಸಚಿವ, ಶಿಕ್ಷಣ ಸಚಿವ, ಮುಖ್ಯಮಂತ್ರಿಗಳ ಸಮರ್ಥನೀಯ ಹೇಳಿಕೆಗಳು, ಇದನ್ನು ಕಂಡೂ ಕಾಣದಂತೆ ವರ್ತಿಸುವ ಮೂಲಕ ಗಲಭೆಗೆ ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ ಎಂದರು.

- Advertisement -

ಸ್ಕಾರ್ಫ್ ವಿವಾದವನ್ನು ಹುಟ್ಟುಹಾಕಿ, ಈ ಕಿಡಿಯನ್ನು ತಾರಕಕ್ಕೇರುವಂತೆ ಮಾಡುವಲ್ಲಿ ಯಶಸ್ವಿ ಕಂಡ ಎ.ಬಿ.ವಿ.ಪಿ ಪ್ರೇರಿತ ಶಕ್ತಿಗಳು    ಫೆಬ್ರವರಿ 9 ರಂದು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಹಿಂಸಾಕೃತ್ಯವನ್ನು ಮಾಡಿ, ರಾಜ್ಯದ ಶಾಂತಿ ಕದಡುವಿಕೆಗೆ ಕಾರಣಕರ್ತರಾಗಿದ್ದಾರೆ ಎಂದು ಅವರು ಹೇಳಿದರು.

ಘಟನೆಗಳ ವಿವರ:

ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಯೋರ್ವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿದ್ದ ರಾಷ್ಟ್ರ ಧ್ವಜಸ್ತಂಭಕ್ಕೆ ಏರಿ ಕೇಸರಿ ಧ್ವಜವನ್ನು ಹಾರಿಸಿದ ಘಟನೆಗೆ ಶಿವಮೊಗ್ಗ ಜಿಲ್ಲೆಯ ಬಾಪೂಜಿ ನಗರ ಸಾಕ್ಷಿಯಾಗಿದೆ.

ಕೊಡಗಿನ ಕುಶಾಲನಗರದ ಕಾಲೇಜೊಂದರಲ್ಲಿ ಕೇಸರಿ ಶಾಲು ಧರಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ವಿದ್ಯಾರ್ಥಿಯೋರ್ವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಬಾಗಲಕೋಟೆಯಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಂ ಘೋಷಣೆಯನ್ನು ಕೂಗಿ, ಗುಂಪು ಘರ್ಷಣೆ ಮಾಡಿದ ಘಟನೆ ನಡೆದಿದೆ. ಮಾತ್ರವಲ್ಲ ಪೊಲೀಸರ ನಡುವೆಯೂ ಘರ್ಷಣೆ ನಡೆದಿದೆ.

ಮಂಡ್ಯದಲ್ಲಿ ಸ್ಕಾರ್ಫ್ ಧರಿಸಿದ ಮುಸ್ಲಿಂ ಯುವತಿಯೊಬ್ಬಳನ್ನು ಕೇಸರಿ ಶಾಲು ಧರಿಸಿದ ಯುವಕರು ಸುತ್ತುವರಿದು ಜೈ ಶ್ರೀರಾಂ ಘೋಷಣೆಯನ್ನು ಕೂಗುವ ಮೂಲಕ ಉದ್ವಿಗ್ನತೆಗೆ ಕಾರಣಕರ್ತರಾಗಿದ್ದಾರೆ.

ಶಿವಮೊಗ್ಗದ ಕೆಲವು ಕಡೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಂದ ವಿದ್ಯಾರ್ಜನೆ ನೀಡುವ ಶಾಲಾ ಕಾಲೇಜುಗಳಿಗೆ ಕಲ್ಲು ತೂರಾಟ ಮತ್ತು ಜೈ ಶ್ರೀರಾಂ ಘೊಷಣೆಗಳ ಮೂಲಕ ಗುಂಪು ಘರ್ಷಣೆ ಮಾಡಲು ಯತ್ನಿಸಿದ್ದಾರೆ ಮತ್ತು ಇದಕ್ಕೆ ಹಲವು ವಿಡಿಯೋಗಳೇ ಸಾಕ್ಷಿ.

ದಾವಣಗೆರೆಯ ಹಲವು ಕಡೆ ಕೇಸರಿ ಪಡೆಯ ವಿದ್ಯಾರ್ಥಿಗಳು ದೊಂಬೊಯೆಬ್ಬಿಸಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಚಿಕ್ಕಮಗಳೂರಿನಲ್ಲಿಯೂ ಇಂತಹ ಸಂಘರ್ಷಗಳಿಗೆ ಕೇಸರಿ ಧಾರಣೆ ವಿದ್ಯಾರ್ಥಿಗಳು ಕಾರಣಕರ್ತರಾಗಿದ್ದಾರೆ.

ಒಟ್ಟು ರಾಜ್ಯದ 18 ಕಡೆಗಳಲ್ಲಿ ಇಂತಹ ದೊಂಬಿ, ಕಲ್ಲು ತೂರಾಟ ಮತ್ತು ಹಿಂಸಾ ಸಂಘರ್ಷಗಳಿಗೆ ಕೇಸರಿ ಶಾಲು ಧರಿಸಿದ ಎ.ಬಿ.ವಿ.ಪಿ ಪ್ರೇರಿತ ಶಕ್ತಿಗಳು ನೇರಕಾರಣಕರ್ತರಾಗಿದ್ದಾರೆ.  ಇದರ ಹಿಂದೆ ಸರಕಾರದ ವ್ಯವಸ್ಥಿತ ಷಡ್ಯಂತ್ರವಿದೆ. ಈಗ ಆಗುತ್ತಿರುವ ಎಲ್ಲಾ ಘಟನೆಗಳಿಗೆ ಶಾಸಕ ರಘುಪತಿ ಭಟ್ ಮತ್ತು ಕ್ರಿಯೆಗೆ ಪ್ರತಿಕ್ರಿಯೆ ಎಂದ ಸಿ.ಎಮ್ ಬೊಮ್ಮಾಯಿ ಮತ್ತು ಕೇಸರಿ ಶಾಲು ಧಾರಣೆಯನ್ನು ಸಮರ್ಥಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರನ್ನೊಳಗೊಂಡ ಇತರ ಸಚಿವರೇ ನೇರಹೊಣೆ.

ನಿನ್ನೆ ನಡೆದ ಗಲಭೆಗೆ ಯಾರು ಮುಖ್ಯ ಕಾರಣ?  ಇದರ ಹಿಂದೆ ಯಾರದೆಲ್ಲಾ ಕೈವಾಡವಿದೆ?  ಎಂದು ಬಹಿರಂಗವಾಗಬೇಕು ಮತ್ತು ನಿನ್ನೆ ವಿಧ್ವಂಸಕ ಕೃತ್ಯವೆಸಗಿದ ಎಲ್ಲರನ್ನೂ ಕಾನೂನಿನ ಕುಣಿಕೆಗೊಳಪಡಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ C.V. ರಮೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.



Join Whatsapp