ನಾಗ್ಪುರದಿಂದ ಗಡಿಪಾರುಗೊಂಡ ಅಫ್ಘಾನ್ ವ್ಯಕ್ತಿ ತಾಲಿಬಾನ್ ಜೊತೆ ಪ್ರತ್ಯಕ್ಷ !

Prasthutha|

ನಾಗ್ಪುರ: ಈ ವರ್ಷದ ಜೂನ್ ನಲ್ಲಿ ನಾಗ್ಪುರದಿಂದ ತನ್ನ ದೇಶಕ್ಕೆ ಗಡಿಪಾರುಗೊಂಡ ಅಫ್ಘಾನ್ ಮೂಲದ ವ್ಯಕ್ತಿಯು ತಾಲಿಬಾನ್ ಬಂಡುಕೋರರ ಜೊತೆ ಪತ್ತೆಯಾಗಿರುವ ಫೋಟೋ ವೈರಲ್ ಆಗುತ್ತಿದೆ.ಅಕ್ರಮವಾಗಿ ಭಾರತದಲ್ಲಿ ವಾಸವಾಗಿದ್ದ ಆತನನ್ನು ನಾಗ್ಪುರದಲ್ಲಿ ಪತ್ತೆ ಹಚ್ಚಲಾಗಿತ್ತು. ಪ್ರಸಕ್ತ ರೈಫಲ್ ಹಿಡಿದಿರುವ ಆತನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ನೂರ್ ಮುಹಮ್ಮದ್ (30) ಎಂಬ ಅಫ್ಘಾನ್ ಮೂಲದ ವ್ಯಕ್ತಿ ಕಳೆದ 10 ವರ್ಷಗಳಿಂದ ನಾಗ್ಪುರದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದರು. ಅವರು ನಗರದ ದಿಗೋರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಚಟುವಟಿಕೆಗಳ ಮೇಲೆ ನಿಗಾ ಇಡಲು ಆರಂಭಿಸಿದ್ದರು. ಕೊನೆಗೆ ಆತನನ್ನು ಬಂಧಿಸಿ ಜೂನ್ 23 ರಂದು ಅಫ್ಘಾನ್ ಗೆ ಗಡಿಪಾರು ಮಾಡಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಮಾತ್ರವಲ್ಲದೆ ಗಡಿಪಾರು ಘಟನೆಯ ನಂತರ ಆತ ತಾಲಿಬಾನ್ ಸೇರಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಆತನ ಗನ್ ಹಿಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯೆಂದು ಅವರು ತಿಳಿಸಿದ್ದಾರೆ.
ಬಂಧಿತ ಮುಹಮ್ಮದ್ ನನ್ನು ತನಿಖೆಗೊಳಪಡಿಸಿದಾಗ 2010 ರಲ್ಲಿ ನಾಗ್ಪುರ ಆರು ತಿಂಗಳ ಪ್ರವಾಸಿ ವೀಸಾದಲ್ಲಿ ಆಗಮಿಸಿರುವುದಾಗಿ ತಿಳಿಸಿದ್ದಾರೆ. ನಂತರ ಅವರು ವಿಶ್ವಸಂಸ್ಥೆಯ ಮಾವನ ಹಕ್ಕುಗಳ ಮಂಡಳಿಗೆ ಅರ್ಜಿ ಸಲ್ಲಿಸಿ ನಿರಾಶ್ರಿತರ ಸ್ಥಾನಮಾನಕ್ಕೆ ಮನವಿ ಮಾಡಿದ್ದರು. ಅವರ ಆ ಅರ್ಜಿಯನ್ನು ಮಾನವ ಹಕ್ಕುಗಳ ಮಂಡಳಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತದಲ್ಲಿ ಕಾನೂನುಬಾಹಿರವಾಗಿ ಉಳಿಯಲು ತೀರ್ಮಾನಿಸಿದ್ದರು.

- Advertisement -

ಆತನನ್ನು ಬಂಧಿಸಿದ ಪೊಲೀಸರು ಆತನು ಭಯೋತ್ಪದಕರೊಂದಿಗೆ ನಂಟು ಹೊಂದಿದ್ದನೆಂದು ಪೊಲೀಸರು ಖಚಿತಪಡಿಸಿದ್ದಾರೆ. ಅವಿವಾಹಿತನಾದ ಆತ ಭಾರತದಲ್ಲಿ ಹೊದಿಕೆ ಮಾರಾಟ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp