ಹೆಚ್ಚು ಶಬ್ದದ ಪಟಾಕಿ, ಸಿಡಿಮದ್ದು ಉಪಯೋಗಿಸದಂತೆ ಸಲಹೆ

Prasthutha|

ಮಂಗಳೂರು: ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999 ರನ್ವಯ ಹಾಗೂ ಸುಪ್ರೀಂ ಕೋರ್ಟ್‍ನ ಆದೇಶ ಡಬ್ಲ್ಯೂ.ಪಿ(ಸಿ)72/98, 2005ರ ಜುಲೈ 21ರ ಪ್ರಕಾರ 125 ಡಿ.ಬಿ(ಎ.ಐ) ಅಥವಾ 145 ಡಿ.ಬಿ(ಸಿ)ಪಿಕೆ ಕ್ಕಿಂತ (ಪಟಾಕಿ ಸಿಡಿಸುವ ಸ್ಥಳದಿಂದ 4ಮೀ. ಅಂತರದಲ್ಲಿ) ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮತ್ತು ಉಪಯೋಗವನ್ನು ನಿಷೇಧಿಸಲಾಗಿದೆ.

- Advertisement -

ಆದ ಕಾರಣ ಸಾರ್ವಜನಿಕರು 125ಡಿ.ಬಿ(ಎ.ಐ) ಅಥವಾ 145 ಡಿ.ಬಿ(ಸಿ)ಪಿ.ಕೆ ಕ್ಕಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದು ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ಇತ್ಯಾದಿಗಳು) ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟು ಮಾಡುವ ನಿಷೇಧಿತ ಪಟಾಕಿ, ಸಿಡಿಮದ್ದು ಬಳಸಬಾರದು.

ಸುಪ್ರೀಂ ಕೋರ್ಟ್ ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು.

- Advertisement -
ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಫೋಟದಿಂದ ಅಪಾಯಗಳಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಸಿಡಿಸಬೇಕು.

ಅಲ್ಲದೇ ಸಾರ್ವಜನಿಕರಲ್ಲಿ ದೀಪಾವಳಿ ಹಬ್ಬವನ್ನು ಸಿಡಿಮದ್ದು, ಪಟಾಕಿಗಳನ್ನು ಉಪಯೋಗಿಸದೇ ದೀಪದ ಹಬ್ಬವನ್ನಾಗಿ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp