ಉಜಿರೆಯಲ್ಲಿ ಉತ್ತರ ಪ್ರದೇಶವನ್ನೂ ನಾಚಿಸುವ ಘಟನೆ
ಬೆಳ್ತಂಗಡಿ: ಸರ್ಕಾರಿ ಜಮೀನಿನ ನಿವೇಶನಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಎಸ್.ಟಿ ವಿಭಾಗದ ಅಧ್ಯಕ್ಷನ ನೇತೃತ್ವದ ತಂಡ ಆದಿವಾಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಆಕೆಯ ಅರೆಬೆತ್ತಲೆ ದೃಶ್ಯಾವಳಿಯನ್ನು ಚಿತ್ರೀಕರಿಸಿದ ಅಮಾನವೀಯ ಘಟನೆ ಬೆಳ್ತಂಗಡಿ ಸಮೀಪದ ಉಜಿರೆಯ ಅಳಕೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅಳಕೆ ನಿವಾಸಿ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಈ ಪ್ರಕರಣದಲ್ಲಿ ಭಾಗಿಯಾದ ಚೆನ್ನಕೇಶವ ಎಂಬಾತ ಬಿಜೆಪಿಯ ಎಸ್.ಟಿ ವಿಭಾಗದ ಅಧ್ಯಕ್ಷನಾಗಿದ್ದು, ಆತನ ನೇತೃತ್ವದಲ್ಲಿ ಆದಿವಾಸಿ ಮಹಿಳೆಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿವೆ.
ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಏಪ್ರಿಲ್ 19 ರಂದು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗಾಗಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದರು. ಈ ವೇಳೆ ಆಸ್ತಿಯ ತಕರಾರಿನ ಹಿನ್ನೆಲೆಯಲ್ಲಿ ಎರಡು ತಂಡಗಳ ನಡುವೆ ಗಲಾಟೆ ಉಂಟಾಗಿ ಆದಿವಾಸಿ ಸಮುದಾಯಕ್ಕೆ ಸೇರಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಬಟ್ಟೆ ಹರಿದು ಹಾಕಿ ಅರೆಬೆತ್ತಲೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸಿದ್ದಾರೆ. ಘಟನೆ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಹಲವರು ಇದ್ದರೂ ಯಾರು ಕೂಡ ತಡೆಯಲು ಪ್ರಯತ್ನಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ತಡೆಯಲು ಬಂದ ಆಕೆಯ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ತಂಡ ಅಲ್ಲಿಂದ ಹೋದ ಬಳಿಕ ಸಂತ್ರಸ್ತ ಮಹಿಳೆ ತನ್ನ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.