ಪೊಲೀಸ್ ಅಧಿಕಾರಿಗಳಿಗೆ BSNL ಬದಲು ಜಿಯೋ ಸಿಮ್: ಸುತ್ತೋಲೆ ಹೊರಡಿಸಿದ ಎಡಿಜಿಪಿ

Prasthutha|

- Advertisement -

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಿದ್ದ ಬಿಎಸ್ ಎನ್ ಎಲ್’ನ ಸಿಯುಜಿ/ಬೀಟ್ ಸಿಮ್ ಕಾರ್ಡ್ಗಳನ್ನು ರಿಲೆಯನ್ಸ್ ಜಿಯೋ ಸಿಮ್ ಕಾರ್ಡ್ ಗೆ ಬದಲಾಯಿಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಸಿಯುಜಿ ಸಿಮ್ ಕಾರ್ಡ್ ನಿಂದ ಜಿಯೊ ಸಿಮ್ ಕಾರ್ಡ್ ಗೆ ಪೋರ್ಟ್ ಆಗುವಂತೆ ಕಮ್ಯುನಿಕೇಶನ್, ಲಾಜಿಸ್ಟಿಕ್ಸ್ ಆ್ಯಂಡ್ ಮಾಡ್ರನೈಸೇಷನ್ ವಿಭಾಗದ ಎಡಿಜಿಪಿ ಸತ್ತೋಲೆ ಹೊರಡಿಸಿದ್ದಾರೆ.


ಜಿಯೋಗೆ ಪೋರ್ಟ್ ಅಗುವ ಮುನ್ನ ಬಾಕಿ ಶುಲ್ಕದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಹೊಸ ಜಿಯೋ ಸಿಮ್ ಕಾರ್ಡ್’ಗಳನ್ನು ಸಂಬಂಧಪಟ್ಟ ಘಟಕಗಳಿಗೆ ತಲುಪಿಸಲಾಗುವುದು. ಪೊಲೀಸ್ ಇಲಾಖೆಯಲ್ಲಿ 38347 ಬಿಎಸ್ಎನ್ಎಲ್ ಸಕ್ರಿಯ ಸಂಪರ್ಕಗಳಿವೆ. ಹೀಗಾಗಿ ಈ ಪೋರ್ಟಿಂಗ್ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು.
ಮೊದಲಿಗೆ ಮೊಬೈಲ್ ಸಂಪರ್ಕಗಳಿಗೆ ಸಂಬಂಧಿಸಿದಂತೆ ಪೋರ್ಟಿಂಗ್ ಕೈಗೆತ್ತಿಕೊಳ್ಳಲಾಗುವುದು, ಪೋರ್ಟಿಂಗ್ ಪ್ರಕ್ರಿಯೆ ನಿರ್ವಹಿಸಲು ಪೊಲೀಸ್ ಇಲಾಖೆಯ ಪ್ರತಿ ಪ್ರತಿ ಘಟಕಕ್ಕೆ ನೋಡಲ್ ಅಧಿಕಾರಿ ನೇಮಿಸುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

- Advertisement -


ರಾಜ್ಯಾದ್ಯಂತ ಸರಿಯಾಗಿ ನೆಟ್ ವರ್ಕ್ ಸಿಗುತ್ತಿಲ್ಲ, ಇದರಿಂದ ಅಧಿಕಾರಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಪೊಲೀಸ್ ಇಲಾಖೆಯು, ಸುಮಾರು 38,347 ಸಿಮ್ ಕಾರ್ಡ್’ಗಳನ್ನು ಬದಲಾಯಿಸಲು ಸರ್ಕಾರ ಅನುಮತಿ ನೀಡಿದೆ.
ಸಿಬ್ಬಂದಿಯ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಳ್ಳಲು ಜಿಯೋಗೆ ಪೋರ್ಟ್ ಮಾಡಬೇಕಾಗುತ್ತದೆ. ಬಿಎಸ್ಎನ್ಎಲ್ ಪೋರ್ಟಿಂಗ್ ಪ್ರಕ್ರಿಯೆಯು ಪೂರ್ವಾಪೇಕ್ಷಿತವಾಗಿದ್ದು, ಮುಂಚಿತವಾಗಿಯೇ ಜಿಯೋ ಸಿಮ್ ಕಾರ್ಡ್’ಗಳನ್ನು ಒದಗಿಸಲಾಗುತ್ತದೆ. ಪ್ರತಿ ಸಿಮ್ ಕಾರ್ಡ್ ನಿಂದ ಪೂರ್ಟ್ ರಿಕ್ವೆಸ್ಟ್ ಸಂಗ್ರಹಿಸುವ ಅಗತ್ಯವಿದ್ದು, ಆರಂಭವಾದ 4 ದಿನಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. 38,347 ಸಕ್ರಿಯ ಸಂಪರ್ಕ ಸಂಖ್ಯೆಗಳನ್ನು ಹೊಂದಿರುವುದರಿಂದ ಎಲ್ಲ ಘಟಕಗಳನ್ನು ಒಳಗೊಳ್ಳಲು ಹಂತ ಹಂತವಾಗಿ ಪೋರ್ಟ್ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಯೋ ಆಯ್ಕೆ:
38,347 ಸಂಪರ್ಕಗಳಲ್ಲಿ ಹೆಚ್ಚಿನ ಸಂಪರ್ಕ ಸಂಖ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಅಲ್ಲಿ ಉತ್ತಮ ನೆಟ್ ವರ್ಕ್ ಕೊರತೆ ಕಂಡುಬಂದಿದೆ. ಇದರಿಂದ ಫೋಟೋ, ವೀಡಿಯೋ ಸೇರಿದಂತೆ ಇತರ ದತ್ತಾಂಶಗಳನ್ನು ವರ್ಗಾಯಿಸುವುದು ಕಷ್ಟಸಾಧ್ಯವಾಗುತ್ತಿತ್ತು. ಪೊಲೀಸ್ ತುರ್ತು ಸೇವೆಗಳಿಗಾಗಿ ಲಭ್ಯವಿರುವ ನೆಟ್ ವರ್ಕ್ ಗಳ ದಕ್ಷತೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳು ಈಗಾಗಲೇ 5ಜಿ ಸೇವೆ ನೀಡುತ್ತಿವೆ. ಆದರೆ ಬಿಎಸ್ಎನ್ಎಲ್ 4ಜಿ ಸೇವೆಯನ್ನೂ ನೀಡುತ್ತಿಲ್ಲ. ಇದರಿಂದ ತುರ್ತು ಸೇವೆಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ರ ಪ್ರಕಾರ ವಾಣಿಜ್ಯ ಮೌಲ್ಯಮಾಪನದ ನಂತರ ರಿಲಯನ್ಸ್ ಜಿಯೋವನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಸರ್ಕಾರದ ತೀರ್ಮಾನಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರವೇ ಬಿಎಸ್ಎನ್ಎಲ್ ಕಂಪನಿಯನ್ನು ಮುಳುಗಿಸಲು ಮುಂದಾಗಿದೆ ಎಂದು ಟೀಕಿಸಿದ್ದಾರೆ.

Join Whatsapp