ನವದೆಹಲಿ: ಹರಾಜಿನಲ್ಲಿ 5ಜಿ ಸ್ಪೆಕ್ಟ್ರಂ ಅನ್ನು ಖರೀದಿ ಮಾಡಿ ಇನ್ನೂ ಅದನ್ನು ಅಳವಡಿಸದ ಅದಾನಿ ಗ್ರೂಪ್ ಕಂಪನಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಮತ್ತೊಮ್ಮೆ ನೋಟೀಸ್ ಕೊಟ್ಟಿದೆ. ಭಾರತದಲ್ಲಿ ಕಮರ್ಷಿಯಲ್ ಆಗಿ 5ಜಿ ಸರ್ವಿಸ್ ಅನ್ನು ಇನ್ನೂ ಯಾಕೆ ಜಾರಿಗೆ ತಂದಿಲ್ಲ, ಯಾಕೆ ವಿಳಂಬವಾಯಿತು ಎಂದು ಉತ್ತರ ಕೇಳಿ ಅದಾನಿ ಡಾಟಾ ನೆಟ್ವರ್ಕ್ಸ್ ಲಿ ಕಂಪನಿಗೆ ಇಲಾಖೆ ಈ ನೋಟೀಸ್ ಜಾರಿ ಮಾಡಿದೆ. ಸ್ಪೆಕ್ಟ್ರಂ ಹರಾಜಿನಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ 2024ರ ಅಕ್ಟೋಬರ್ 10ರಷ್ಟರಲ್ಲಿ ಕಮರ್ಷಿಯಲ್ 5ಜಿ ನೆಟ್ವರ್ಕ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲದಿದ್ದರೆ ಸ್ಪೆಕ್ಟ್ರಂ ನೀಡಲಾಗಿದ್ದನ್ನು ಸರ್ಕಾರ ಹಿಂಪಡೆಯುವ ಸಂಭವ ಇರುತ್ತದೆ ಎಂದು ತಿಳಿದುಬಂದಿದೆ.
5ಜಿ ಸ್ಪೆಕ್ಟ್ರಂ ಅನ್ನು ಹರಾಜಿನಲ್ಲಿ ಪಡೆದಿದ್ದ ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ಈಗಾಗಲೇ ವಾಣಿಜ್ಯಾತ್ಮಕವಾಗಿ 5ಜಿ ಸರ್ವಿಸ್ಗಳನ್ನು ಎಲ್ಲೆಡೆ ಅಳವಡಿಸುತ್ತಿವೆ. ವೊಡಾಫೋನ್ ಐಡಿಯಾ ಕೂಡ ವಿಳಂಬವಾದರೂ 5ಜಿ ನೆಟ್ವರ್ಕ್ ಚಾಲನೆಗೊಳಿಸಿದೆ. ಹರಾಜಿನಲ್ಲಿ ಪಾಲ್ಗೊಂಡು ಸ್ಪೆಕ್ಟ್ರಂ ಹಂಚಿಕೆ ಪಡೆದಿದ್ದ ಅದಾನಿ ಸಂಸ್ಥೆ ಇನ್ನೂ ಕೂಡ ಕಮರ್ಷಿಯಲ್ 5ಜಿ ಸರ್ವಿಸ್ ಚಾಲನೆಗೊಳಿಸಿಲ್ಲ.
ಅದಾನಿ ಗ್ರೂಪ್ನಿಂದ ಏರ್ಪೋರ್ಟ್ ಮತ್ತು ಪೋರ್ಟ್ಗಳ ನಿರ್ವಹಣೆ ಆಗುತ್ತಿದೆ. ಇನ್ನೂ ಹಲವು ಬಿಸಿನೆಸ್ಗಳು ಅದರ ಬಳಿ ಇವೆ. ಈ ವ್ಯವಹಾರಗಳಿಗೆಂದು ಸ್ವಂತವಾಗಿ 5ಜಿ ಸ್ಪೆಕ್ಟ್ರಂ ಅನ್ನು ಅದು ಬಿಡ್ ಮೂಲಕ ಖರೀದಿ ಮಾಡಿತ್ತು. ಆದರೆ, ಸ್ವಂತ ಉದ್ಯಮಕ್ಕೆ ಮಾತ್ರವಲ್ಲ, ಕಮರ್ಷಿಯಲ್ ಆಗಿಯೂ 5ಜಿ ಸರ್ವಿಸ್ ಒದಗಿಸುವುದು ಕಡ್ಡಾಯವಾಗಿದೆ. ಈ ವರ್ಷಾರಂಭದಲ್ಲಿಯೂ ಅದಾನಿ ಗ್ರೂಪ್ಗೆ ಈ ಬಗ್ಗೆ ನೋಟೀಸ್ ಕೊಡಲಾಗಿತ್ತು. ಈಗ ಅಕ್ಟೋಬರ್ ತಿಂಗಳ ಡೆಡ್ಲೈನ್ ಸಮೀಪಿಸುತ್ತಿರುವುದರಿಂದ ಮತ್ತೊಮ್ಮೆ ನೋಟೀಸ್ ನೀಡಲಾಗಿದೆ.
ಅದಾನಿ ಗ್ರೂಪ್ಗೆ ಸೇರಿದ ಅದಾನಿ ಡಾಟಾ ನೆಟ್ವರ್ಕ್ಸ್ ಸಂಸ್ಥೆ 2022ರ ಜುಲೈನಲ್ಲಿ ನಡೆದ ಸ್ಪೆಕ್ಟ್ರಂ ಹರಾಜಿನಲ್ಲಿ 26 ಗೀಗಾಹರ್ಟ್ಜ್ ಬ್ಯಾಂಡ್ವಿಡ್ತ್ನಲ್ಲಿ ಒಟ್ಟು 400 ಮೆಗಾಹರ್ಟ್ಜ್ ಸ್ಪೆಕ್ಟ್ರಂ ಅನ್ನು 212 ಕೋಟಿ ರೂ ಮೊತ್ತಕ್ಕೆ ಖರೀದಿ ಮಾಡಿತ್ತು. ಕರ್ನಾಟಕ, ಆಂಧ್ರ, ಗುಜರಾತ್, ಮುಂಬೈ, ತಮಿಳುನಾಡು ಮತ್ತು ರಾಜಸ್ಥಾನ ಈ ಆರು ಸರ್ಕಲ್ಗಳಿಗೆ ಸ್ಪೆಕ್ಟ್ರಂ ಪಡೆದಿದೆ.