‘ಇಂಡಿಯಾ ಎಂದರೆ ಗುಲಾಮಗಿರಿ’ : ನಟಿ ಕಂಗನಾ ರಾಣಾವತ್ ವಿವಾದಾತ್ಮಕ ಹೇಳಿಕೆ

Prasthutha|

ಹೊಸದಿಲ್ಲಿ: ಸಿನಿಮಾ ರಂಗವಲ್ಲದೆ ತನ್ನ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ಕಂಗನಾ ರಾಣಾವತ್​ ಈಗ ಹೊಸ ವಿವಾದವೊಂದನ್ನು ಸೃಷ್ಠಿಸಿದ್ದಾರೆ. ನಮ್ಮ ದೇಶವನ್ನು ಇಂಡಿಯಾ ಎಂಬ ಹೆಸರಲ್ಲದೆ ಭಾರತ ಎಂದು ಕರೆಯಬೇಕು. ಇಂಡಿಯಾ ಎಂದರೆ ಗುಲಾಮಗಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

- Advertisement -

ತನ್ನ ಅಧಿಕೃತ ಕೂ ಖಾತೆಯಲ್ಲಿ ಬರೆದುಕೊಂಡಿರುವ ಕಂಗನಾ, ‘ಭಾರತವು ತನ್ನ ಪ್ರಾಚೀನ ಆಧ್ಯಾತ್ಮಿಕತೆಯಿಂದ ಮುಂದುವರಿದರೆ ಮಾತ್ರವೇ ಯಶಸ್ಸು ಕಾಣಲು ಸಾಧ್ಯ. ಪ್ರಾಚೀನ ಆಧ್ಯಾತ್ಮಿಕತೆ ನಮ್ಮ ನಾಗರಿಕತೆಯ ಆತ್ಮ. ನಾವು ಪಾಶ್ಚಿಮಾತ್ಯ ಪ್ರಪಂಚದ ಪ್ರತಿಬಿಂಬ ಆಗದೆ ನಮ್ಮ ವೇದಗಳು, ಗೀತಾ ಮತ್ತು ಯೋಗಗಳಲ್ಲಿ ಆಳವಾಗಿ ಬೇರೂರಿದರೆ ನಾವು ವಿಶ್ವ ನಾಯಕರಾಗಿ ಹೊರಹೊಮ್ಮುತ್ತೇವೆ. ದಯವಿಟ್ಟು ಆ ಗುಲಾಮರು ಇಟ್ಟ ಇಂಡಿಯಾ ಎನ್ನುವ ಹೆಸರನ್ನು ಭಾರತ ಎಂದು ಬದಲಾಯಿಸಬಹುದೇ?’ ಎಂದು ಕೇಳಿಕೊಂಡಿದ್ದಾರೆ.

‘ಬ್ರಿಟಿಷರು ನಮಗೆ ಇಂಡಿಯಾ ಎಂಬ ಗುಲಾಮಗಿರಿಯ ಹೆಸರನ್ನು ನೀಡಿದರು. ಇಂಡಿಯಾ ಎಂದರೆ ಸಿಂಧೂ ಕಣಿವೆಯ ಪೂರ್ವ ಎಂದರ್ಥ. ಇದು ಯಾವ ರೀತಿಯ ಹೆಸರು? ಭಾರತ ಎಂಬ ಹೆಸರಿನ ಅರ್ಥವನ್ನು ನೀವು ತಿಳಿದುಕೊಳ್ಳಬೇಕು. ಭಾ- ಭಾವ, ರ- ರಾಗ, ತ-ತಾಳ ಇದು ಭಾರತ ಶಬ್ದದ ಅರ್ಥ’ ಎಂದು ತಿಳಿಸಿದ್ದಾರೆ.

- Advertisement -

ಇದನ್ನು ವಿರೋಧಿಸಿ ಹಲವರು ಪ್ರತಿಕ್ರಿಯಿಸಿದ್ದು, ‘ದೇಶದ ಹೆಸರನ್ನು ಬದಲಿಸಿದ್ದರಿಂದ ಅಥವಾ ಬದಲಿಸುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ದೇಶದ ಜನತೆಯ ಆಲೋಚನೆ ಹಾಗೂ ನಡತೆ ಎರಡೂ ಬದಲಾಗಬೇಕು. ಆದರೆ ಮಾತ್ರ ನಿಜವಾದ ಬದಲಾವಣೆ ಸಾಧ್ಯ’ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಕೆಲವರು ‘ನೀವು ಹೇಳಿದಂತೆ ಈ ದೇಶಕ್ಕೆ ಹೆಸರು ಬಂದಿಲ್ಲ. ಶಂಕುತಲಾ ಮತ್ತು ದುಶ್ಯಂತನ ಮಗ ಭರತನಿಂದ ಭಾರತ ಎನ್ನುವ ಹೆಸರು ಬಂದಿದೆ’ ಎಂದು ತಿಳಿಸಿದ್ದಾರೆ.



Join Whatsapp