ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಜೋರಾಗಿದ್ದು, ನಟಿ ಭಾವನಾ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಕೂಡ ಅರ್ಜಿ ಸಲ್ಲಿಸಿದ್ದಾರೆ.
ನಟಿ ಭಾವನಾ ಯಶವಂತಪುರ ಕ್ಷೇತ್ರದ ಟಿಕೆಟ್ ಬಯಸಿ ಅರ್ಜಿ ಸಲ್ಲಿದ್ದರೆ, ನಲಪಾಡ್ ಶಿವಾಜಿನಗರ ಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ. ಈಗಾಗಲೇ ಶಿವಾಜಿನಗರದ ಹಾಲಿ ಶಾಸಕ ರಿಝ್ವಾನ್ ಅರ್ಷದ್ ಇದ್ದಾರೆ. ಆದರೂ ನಲಪಾಡ್ ಈ ಬಾರಿ ಶಿವಾಜಿನಗರ ಟಿಕೆಟ್ ತಮಗೆ ಬೇಕೆಂದು ಅರ್ಜಿ ಹಾಕಿದ್ದು, ಹಾಲಿ ಶಾಸಕರನ್ನು ಬಿಟ್ಟು ನಲಪಾಡ್ ಗೆ ಟಿಕೆಟ್ ಸಿಗುತ್ತಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯುವ ಸಲುವಾಗಿ 1100ಕ್ಕೂ ಹೆಚ್ಚು ಆಕಾಂಕ್ಷಿಗಳು 5 ಸಾವಿರ ರೂ. ಶುಲ್ಕ ಪಾವತಿಸಿ ಅರ್ಜಿಗಳನ್ನು ಖರೀದಿಸಿದ್ದಾರೆ. ಇದರಲ್ಲಿ 500ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು, ದಿನಾಂಕ ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.