ಗದಗ: ನಟ ಯಶ್ ಹುಟ್ಟುಹಬ್ಬ ಶುಭಾಶಯ ಕೋರಿ ಬ್ಯಾನರ್ ಹಾಕುವಾಗ ಮೂವರು ಅಭಿಮಾನಿಗಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಯಶ್ ವಾಪಸ್ ತೆರಳುತ್ತಿದ್ದಾಗ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಯುವಕ ನಿಖಿಲ್ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ.
ತನ್ನ ನೆಚ್ಚಿನ ನಟ ಯಶ್ ಅವರನ್ನು ನೋಡಬೇಕು ಎಂದು ಹಿಂಬಾಲಿಸುತ್ತಿದ್ದ ನಿಖಿಲ್ ಸ್ಕೂಟಿ ಗದಗ ಮುಳುಗುಂದ ರಸ್ತೆಯಲ್ಲಿ ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಿಖಿಲ್ನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾರೆ.
ಇನ್ನು ಘಟನೆ ಸಂಬಂಧ ಗದಗ ಎಸ್ ಪಿ ಬಿ.ಎಸ್.ನೇಮಗೌಡ ಮಾತನಾಡಿದ್ದು, ಬೈಕ್ ಗೆ ಡಿಕ್ಕಿ ಹೊಡೆದ ಜೀಪ್ ಯಶ್ ಬಗಾವಲು ವಾಹನ ಅಲ್ಲ. ಅದು ಪೊಲೀಸ್ ಹೆಡ್ ಕ್ವಾಟರ್ ಗೆ ಹೋಗುವ ಪೊಲೀಸ್ ಜೀಪ್. ನಟ ಯಶ್ ಅವರನ್ನು ಬೈಪಾಸ್ ಹೈವೇ ಯಿಂದಲೇ ಹುಬ್ಬಳ್ಳಿಗೆ ಕಳಿಸಲಾಗಿದೆ. ನಟ ಯಶ್ ಅವರ ಬೆಂಗಾವಲು ವಾಹನಕ್ಕೂ ಈ ಅಪಘಾತಕ್ಕೂ ಸಂಬಂಧವಿಲ್ಲ. ನಟ ಯಶ್ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ ಎಂದು ತಿಳಿಸಿದ್ದಾರೆ.