ಕೇರಳ ಗಡಿ ಭಾಗದಲ್ಲಿ ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನಕ್ಕೆ ಕ್ರಮ: ಶಿವರಾಜ್ ತಂಗಡಗಿ

Prasthutha|

ಬೆಂಗಳೂರು: ಕೇರಳ ಗಡಿ ಭಾಗದಲ್ಲಿ ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

- Advertisement -

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಗುರುವಾರ ಹಮ್ಮಿಕೊಂಡ ಮಲಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಮಲಯಾಳಂ ಭಾಷೆಗಳ ಮಧ್ಯೆ ಉತ್ತಮ ಬಾಂಧವ್ಯವಿದೆ ಎಂದ ಸಚಿವರು, ಕೇರಳದ ಮಹಾತ್ಮರೆನಿಸಿದ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ. ಅನೇಕ ಮಲಯಾಳಿ ಸಾಹಿತ್ಯ ಕೃತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಗೊಂಡು, ಪ್ರಕಟವಾಗಿವೆ. ನಾರಾಯಣ ಗುರುಗಳ ಸಾಹಿತ್ಯವನ್ನು ಸಹ ಕನ್ನಡ ಭಾಷೆಯಲ್ಲಿ ಅನುವಾದ ಮಾಡಿ, ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

- Advertisement -

ಸಮಾರಂಭ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೆರವೇರಿಸಿದರು. ಕನ್ನಡ-ಮಲಯಾಳಿ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಬೇಕು. ಇದರಿಂದ ಮಲಯಾಳಿಗಳು ಹಾಗೂ ಕನ್ನಡಿಗರು ತಮ್ಮ ಭಾಷಾ ಪ್ರೇಮದ ಜತೆಗೆ ಸಾಹಿತ್ಯ ಸಂಭ್ರಮವನ್ನು ಸವಿಯಲು ಸಾಧ್ಯವಾಗುತ್ತದೆ. ಭಾಷೆ ಯಾವುದೇ ಇರಲಿ, ಅದಕ್ಕೆ ತನ್ನದೇ ಆದ ಬಲ ಇರುತ್ತದೆ. ಒಂದು ಸಮಾಜದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಬೆಳೆಯುವುದೇ ಭಾಷೆಯಿಂದ. ಭಾಷೆ ಬಲಿಷ್ಠವಾದರೆ ಸಮಾಜವೂ ಬಲಿಷ್ಠವಾಗುತ್ತದೆ ಎಂದು ಖಾದರ್ ಹೇಳಿದರು.

ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆ ಬಲಿಷ್ಠವಾಗಿ ಉಳಿಯಲು ರಾಜ್ಯ ಭಾಷೆಗಳು ಪ್ರಮುಖ. ಭಾಷೆ ದುರ್ಬಲವಾದರೆ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ರಾಜ್ಯದಲ್ಲಿ 230ಕ್ಕೂ ಹೆಚ್ಚು ಭಾಷೆಗಳಿವೆ. ನಾವು ರಾಜ್ಯ ಭಾಷೆಯ ಜತೆಗೆ ಸಣ್ಣ ಭಾಷೆಗಳನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.

ಲೇಖಕ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಮತ್ತು ಮಲಯಾಳಂ ಮಿಷನ್‌ನ ಟಾಮಿ ಜೆ. ಅಲುಂಕಲ್ ಉಪಸ್ಥಿತರಿದ್ದರು.



Join Whatsapp