ನೆರೆ ಹಾವಳಿಯಿಂದ ಉಂಟಾಗಿರುವ ಎಲ್ಲಾ ಬೆಳೆಗಳ ಹಾನಿಗೂ ಪರಿಹಾರ ನೀಡಲು ಕ್ರಮ: ಆರ್ ಅಶೋಕ್

Prasthutha|

ಬೆಂಗಳೂರು; ರಾಜ್ಯದಲ್ಲಿ ನೆರೆ ಹಾವಳಿಯಿಂದ ಉಂಟಾಗಿರುವ ಎಲ್ಲ ಬೆಳೆಗಳ ಹಾನಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಜ್ಯಾದ್ಯಂತ ಸುಮಾರು 5 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದ್ದು, ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲಾಗುತ್ತಿದೆ. ಇದಕ್ಕಾಗಿ ತುರ್ತಾಗಿ ಜಂಟಿ‌ ಸಮೀಕ್ಷೆ ನಡೆಸಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಬೇಕು. ಪ್ರತಿನಿತ್ಯ ಜಂಟಿ ಸಮೀಕ್ಷೆ ಮುಗಿದ ನಂತರ ಅಂದೇ ತಂತ್ರಾಂಶದಲ್ಲಿ ದಾಖಲಿಸಬೇಕು. ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೂ‌ ಸೂಚನೆ ನೀಡಲಾಗಿದೆ ಎಂದು ಹೇಳಿದರು.

- Advertisement -

ಇದರಿಂದ ರೈತರಿಗೆ ಮರುದಿನವೇ ಪರಿಹಾರ ನೀಡಲು ಅನುಕೂಲವಾಗುತ್ತದೆ. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ನವಂಬರ್ 30 ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ. ತಾವು ಕೊಡಗು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬೆಳೆ ಮತ್ತು ಆಸ್ತಿ ಹಾನಿಯನ್ನು ಖುದ್ದು ಪರಿಶೀಲನೆ ಮಾಡಿದ್ದೇನೆ. ಎಲ್ಲ ಬೆಳೆಗಳು ಹಾನಿಯಾಗಿದ್ದು, ರಾಗಿ ಬೆಳೆ ಅತೀ ಹೆಚ್ಚು ಅಂದರೆ ಸುಮಾರು 1.5 ಲಕ್ಷ ಹೆಕ್ಟೇರ್ ನಷ್ಟು ಹಾಳಾಗಿದೆ ಎಂದು ಹೇಳಿದರು.

ಸರ್ಕಾರ 1.5 ಲಕ್ಷ ರೈತರಿಗೆ ಈವರೆಗೆ 130 ಕೋಟಿ ಹಣ ಪಾವತಿ ಮಾಡಿತ್ತು. ನಿನ್ನೆ 70 ಸಾವಿರ ರೈತರಿಗೆ 52 ಕೋಟಿ ಹಣವನ್ನು ನೇರವಾಗಿ ಬ್ಯಾಂಕಿಗೆ ಜಮಾ ಮಾಡಿದೆ. ಒಟ್ಟು 2.2 ಲಕ್ಷ ರೈತರಿಗೆ 180 ಕೋಟಿ ಹಣವನ್ನು ನೀಡಲಾಗಿದೆ ಎಂದರು.

- Advertisement -

“ಮನೆ ಹಾನಿಯಾದವರಿಗೆ ಈವರೆಗೆ 332 ಕೋಟಿ ನೀಡಲಾಗಿತ್ತು. ಮತ್ತೆ 415 ಕೋಟಿ ಹಣ ನೀಡಿದ್ದೇವೆ. ಮನೆಗೆ ನೀರು ನುಗ್ಗಿ ಸಮಸ್ಯೆ ಆದವರಿಗೆ ತಲಾ 10 ಸಾವಿರ ಹಣವನ್ನು 24 ಗಂಟೆಯೊಳಗೆ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈವರೆಗೆ 85 ಸಾವಿರ ಜನರಿಗೆ ಸುಮಾರು 85 ಕೋಟಿ ಹಣ ನೀಡಿದ್ದೇವೆ. ರಾಜ್ಯದಲ್ಲಿ ಈ ವರ್ಷ ಮಳೆಯಿಂದ 118 ಜನ ಸಾವನ್ನಪ್ಪಿದ್ದು ತಲಾ 5 ಲಕ್ಷದಂತೆ 5.9 ಕೋಟಿ ನೀಡಲಾಗಿದೆ. ಮನೆ ಬಿದ್ದು ಸಮಸ್ಯೆ ಆದವರಿಗೆ 2 ದಿನದಲ್ಲಿ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದರು.ಎನ್.ಡಿ.ಆರ್.ಎಫ್ ನಿಂದ 760 ಕೊಟಿ ಬೆಳೆ ಹಾನಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮತ್ತೂ 900 ಕೋಟಿ ಬೇಕು ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ ಎಂದು ಹೇಳಿದರು.

“ಸಾಮಾನ್ಯ ಬೆಳೆಗೆ 6,800 ರೂ ಬದಲು 20,000, ನೀರಾವರಿ ಜಮೀನಿಗೆ 13,500 ಬದಲು 35,000, ವಾಣಿಜ್ಯ ಬೆಳೆಗೆ 18,000 ಬದಲು 49,000 ರೂಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಇದು ಇಡೀ ರಾಷ್ಟ್ರಕ್ಕೆ ಅನ್ವಯವಾಗಲಿದೆ ಎಂದರು.ಕಳೆದ 7 ವರ್ಷ ಗಳಲ್ಲಿ ಮೋದಿ ಸರ್ಕಾರ, ಕಾಂಗ್ರೆಸ್ ನ 10 ವರ್ಷಗಳ ಅವಧಿಗಿಂತ ಮೂರು ಪಟ್ಟು ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.

ರಾಜ್ಯಕ್ಕೆ ನ 26 ರಂದು ಮತ್ತೊಂದು ಸೈಕ್ಲೋನ್ ಸಮಸ್ಯೆ ತಲೆ ದೋರಲಿದೆ ಎಂಬ ಮಾಹಿತಿ ಇದ್ದು, ಹೀಗಾಗಿ ಇದೇ 26, 27, 28 ರಂದು ಅಗತ್ಯ ಎಚ್ಚರಿಕೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಬಿಬಿಎಂಪಿ ಅಧಿಕಾರಿಗಳಿಗೂ ಸೂಕ್ತ ಸೂಚನೆ ಕೊಡಲಾಗಿದೆ ಎಂದು ಹೇಳಿದರು.

Join Whatsapp