ಬೆಂಗಳೂರು: ದೇವಸ್ಥಾನ, ಮಸೀದಿ, ಚರ್ಚು ಹೀಗೆ ಎಲ್ಲಾ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಇದರಿಂದ ಯಾರಿಗೆ ತೊಂದರೆ ಆಗಿದೆ? ಚುನಾವಣಾ ವರ್ಷ ಎಂದು ಈ ರೀತಿ ಬೇಕಂತಲೇ ಕ್ಯಾತೆ ತೆಗೆಯುತ್ತಿದ್ದಾರೆ. ಇವೆಲ್ಲ ಸಮಾಜದ ಶಾಂತಿ, ಸಾಮರಸ್ಯ ಹಾಳುಮಾಡುವ ಪ್ರಯತ್ನಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎಲ್ಲಾ ಬೆಳವಣಿಗೆಗಳು ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ. ಮುಖ್ಯಮಂತ್ರಿಗಳು ಮೌನವಾಗಿರುವುದಲ್ಲ, ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದ್ದಾರೆ. ಆರ್.ಎಸ್.ಎಸ್ ಮತ್ತು ಭಜರಂಗದಳ ಸರ್ಕಾರಕ್ಕೆ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡುವುದಿಲ್ಲ. ಇದನ್ನು ಸರ್ಕಾರ ಹತ್ತಿಕ್ಕಬೇಕು, ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು .
ಇಂಥಾ ಘಟನೆಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ರಾಜ್ಯಕ್ಕೆ ಯಾವ ಬಂಡವಾಳ ಹೂಡಿಕೆದಾರರು ಬರುವುದಿಲ್ಲ, ಉದ್ಯೋಗ ಸೃಷ್ಟಿ, ನಿರುದ್ಯೋಗ ಸಮಸ್ಯೆ ನಿವಾರಣೆ, ರಾಜ್ಯದ ಜಿಡಿಪಿ ಬೆಳವಣಿಗೆ ಯಾವುದೂ ಸಾಧ್ಯವಿಲ್ಲ. ಸಮಾಜದ ಕೋಮು ಸಾಮರಸ್ಯ ಹಾಳುಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಇದು ನಿಮಗೆ ಮುಂದೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.