ಬೆಂಗಳೂರು: ರಾಜ್ಯ ಸರ್ಕಾರ 4000 ಅಂಗನವಾಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದ್ದು, ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಥಳ ಲಭ್ಯವಿರುವ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಇನ್ನು ಆರು ತಿಂಗಳಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ವೇದಾಂತ ಸಂಸ್ಥೆಯ ವತಿಯಿಂದ ಸವಣೂರಿನ ಹಾವಣಗಿ ಪ್ಲಾಟ್ ಬಳಿ ಆಯೋಜಿಸಿರುವ ಅಂಗನವಾಡಿ ನೂತನ ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಗಣಿ ಮತ್ತು ಕಲ್ಲಿದ್ದಲು , ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರ ಮುತುವರ್ಜಿಯಿಂದ ಈ ಕ್ಷೇತ್ರದಲ್ಲಿ 50 ಕ್ಕಿಂತ ಹೆಚ್ಚು ಅಂಗನವಾಡಿಗಳನ್ನು ನಿರ್ಮಿಸುತ್ತಿದ್ದಾರೆ. ಶಿಗ್ಗಾಂವ್, ಸವಣೂರು, ಬಂಕಾಪುರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಬೇಕೆಂದು ಕೇಂದ್ರ ಸಚಿವರನ್ನು ಕೋರಲಾಗಿದೆ. ಬಡವರಿರುವ ಈ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 20 ಕೋಟಿ ರೂ.ಗಳನ್ನು ಈಗಾಗಲೇ ನೀಡಲಾಗಿದ್ದು, ಮೂಲಸೌಕರ್ಯಗಳ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವ ಶಿವರಾಂ ಹೆಬ್ಬಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.