ಮಂಗಳೂರು: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಬಹಳ ಸೂಕ್ಷ್ಮವಾಗಿರುವ ವಿಚಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೇ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಆ್ಯಂಡ್ ರಿಯಾಕ್ಷನ್ ಆಗುತ್ತದೆ. ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದ ಅವರು,
ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮೊರಾಲಿಟಿ ಎನ್ನುವುದು ಸಮಾಜದಲ್ಲಿ ಬೇಕಲ್ವಾ..? ನೈತಿಕತೆ ಇಲ್ಲದೆ ಬದುಕಲು ಆಗುತ್ತದೆಯೇ ? ಎಂದು ಪ್ರಶ್ನಿಸಿದರು.
ಇವತ್ತು ನಾವು ನೈತಿಕತೆ ಇಲ್ಲದೆ ಬದುಕಲು ಆಗುವುದಿಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತೆ ಎಂದರು. ಕರ್ನಾಟಕದಲ್ಲಿ ಕಲ್ಲಿದ್ದಲು ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ಕಳೆದ ವಾರ ನಮಗೆ 8 ರೇಕ್ ಬರುತ್ತಾ ಇತ್ತು. ಈಗ ಕೇಂದ್ರ ಸರ್ಕಾರದ ಜೊತೆ ಮಾತನಾಡಿದ ಮೇಲೆ 10 ರೇಕ್ ಕೊಡುವುದಾಗಿ ಹೇಳಿದೆ. ಇನ್ನ ಎರಡ್ಮೂರು ದಿನಗಳಲ್ಲಿ ಅದು ರಾಜ್ಯಕ್ಕೆ ಬರುತ್ತದೆ ಎಂದರು.
ಮಂಗಳೂರಿನ ಕುದ್ರೋಳಿ ದೇವಸ್ಥಾನದ ದಸರಾ ಕಾರ್ಯಕ್ರಮ ಹಾಗೂ ಉಡುಪಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವಸುನೀಲ್ ಕುಮಾರ್, ಶಾಸಕರಾದ ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.