ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ವಿವೇಚನೆಯಿಂದ ವರ್ತಿಸಿ: ಮುಸ್ಲಿಮ್ ಯುವಕರಿಗೆ ಮುಖಂಡರ ಕರೆ

Prasthutha|

ಬೆಂಗಳೂರು: ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣವನ್ನು ಮುಸ್ಲಿಮ್ ಧಾರ್ಮಿಕ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ನಡೆಸುವ ವ್ಯವಸ್ಥಿತ ಷಡ್ಯಂತ್ರಕ್ಕೆ ಬಲಿಯಾಗದಂತೆ ಸಮುದಾಯದ ಯುವಕರಿಗೆ ಅವರು ಕರೆ ನೀಡಿದ್ದಾರೆ.
ಬುಧವಾರ ನಗರದ ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆ ಹಾಗೂ ಮಸ್ಜಿದೆ ತಾಹಾ ನೇತೃತ್ವದ ನಿಯೋಗವು ಮೌಲಾನ ಮಕ್ಸೂದ್ ಇಮ್ರಾನ್ ರಶಾದಿಯವರನ್ನು ಭೇಟಿ ಮಾಡಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿತು.

- Advertisement -


ದೇಶದಲ್ಲಿ ಹಾಗೂ ರಾಜ್ಯದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಧರ್ಮ, ಪ್ರವಾದಿ ಅಥವಾ ಧಾರ್ಮಿಕ ಯಾತ್ರಾ ಸ್ಥಳಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರಾದರೂ ನಿಂದನಾತ್ಮಕ ಸಂದೇಶಗಳನ್ನು ಹಾಕಿದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಸಮುದಾಯದ ಯುವಕರು ವಿವೇಕ ಹಾಗೂ ವಿವೇಚನೆಯಿಂದ ವರ್ತಿಸಬೇಕು ಎಂದು ಮುಖಂಡರು ಕರೆ ನೀಡಿದರು.


ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಅಮೀರೆ ಶರೀಅತ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳು ಅಸ್ತಿತ್ವದಲ್ಲಿವೆ. ಅವರ ಮೂಲಕ ಪೊಲೀಸ್ ಠಾಣೆಗಳಿಗೆ ದೂರು ನೀಡಿ, ಕಾನೂನಾತ್ಮಕವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆ ಹೊರತು, ಭಾವನಾತ್ಮಕವಾಗಿ ವರ್ತಿಸಿ, ಕಿಡಿಗೇಡಿಗಳು ರಚಿಸಿರುವ ಜಾಲದಲ್ಲಿ ಸಿಲುಕಿ ಬೀಳಬಾರದು ಎಂದು ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ ಮನವಿ ಮಾಡಿದರು.

- Advertisement -


ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ರಾಜಕೀಯ ನಾಯಕತ್ವ ದುರ್ಬಲವಾಗಿರುವುದರಿಂದ ಧಾರ್ಮಿಕ ಮುಖಂಡರು ಸಮುದಾಯಕ್ಕೆ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಸಮುದಾಯಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಿ, ಸಮಾಜದಲ್ಲ ಶಾಂತಿ, ಸೌಹಾರ್ದತೆಯನ್ನು ನೆಲೆಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂಬ ಉದ್ದೇಶದಿಂದ ಇವತ್ತಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹಿರಿಯ ಪತ್ರಕರ್ತ ಬೆಳಗೂರು ಸಮೀವುಲ್ಲಾ ಹೇಳಿದರು.
ನಿಯೋಗದಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆಯ ಅಧ್ಯಕ್ಷ ಕನ್ನಡ ಸಮೀವುಲ್ಲಾ ಖಾನ್, ಮುಖಂಡರಾದ ಸಾಗರ್ ಸಮೀವುಲ್ಲಾ, ಮಸ್ಜಿದೆ ತಾಹಾ ಆಡಳಿತ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.



Join Whatsapp