ಕನಕಪುರ: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೋರ್ವ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಮಾಡಿದ ಘಟನೆ ಕನಕಪುರ ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕುರುಪೇಟೆಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಸುಮಂತ್ (20) ಬಂಧಿತ ಆರೋಪಿ.
ಕಾರು ಮೆಕಾನಿಕ್ ಕೆಲಸ ಮಾಡುತ್ತಿದ್ದ ಸುಮಂತ್ ತನ್ನ ಗ್ಯಾರೇಜ್ ಮುಂಭಾಗದಿಂದ ನಡೆದುಕೊಂಡು ಕಾಲೇಜ್ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡ ಹಾಕಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆಕೆಯು ಪ್ರೀತಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡು ಕಳೆದ ದಿನ ರಾತ್ರಿ 9 ಗಂಟೆ ವೇಳೆ ಕನಕಪುರ ತಾಲೂಕಿನ ಬೈಪಾಸ್ ರಸ್ತೆ ನಾರಾಯಣಪ್ಪ ಕೆರೆ ಬಳಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ.
ಅಗಲೂ ಅವನ ಪ್ರೀತಿಯನ್ನು ನಿರಾಕರಿಸಿದಾಗ ರೊಚ್ಚಿಗೆದ್ದ ಸುಮಂತ್ ತಾನೂ ತಂದಿದ್ದ ಆ್ಯಸಿಡ್ ಅನ್ನು ಅವಳ ಮುಖದ ಮೇಲೆ ಎರಚಿ ಪರಾರಿಯಾಗಿದ್ದಾನೆ.
ಆ್ಯಸಿಡ್ ದಾಳಿಯಿಂದ ನರಳಾಡುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆ್ಯಸಿಡ್ ದಾಳಿಯಿಂದ ಬಾಲಕಿಯ ಎಡ ಕಣ್ಣಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಕಣ್ಣು ಮತ್ತು ಆಕೆಯ ಸ್ಥಿತಿಯ ಬಗ್ಗೆ ವೈದ್ಯರು ಇನ್ನೂ ಯಾವುದೇ ವರದಿ ನೀಡಿಲ್ಲ.
ಸ್ಥಳಕ್ಕೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಬಾಲಕಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದು ಕೆಲ ಹೊತ್ತಿನಲ್ಲೆ ಆರೋಪಿಯನ್ನು ಬಂಧಿಸಿದ್ದಾರೆ.