ಬೆಂಗಳೂರು: ಬೆಂಗಳೂರಿನ ಸುಂಕದಕಟ್ಟೆ ಬಳಿ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ತ ಯುವತಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ 5 ಲಕ್ಷ ರೂಪಾಯಿಗಳ ವೈಯಕ್ತಿಕ ಧನ ಸಹಾಯ ನೀಡಿದ್ದಾರೆ. ಅಮಾನುಷ ಕೃತ್ಯವೆಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಸೇಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿ ಮಾಡಿ, ನಂತರ ಮಾತನಾಡಿದ ಅವರು, ಆ್ಯಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಹಾಗೂ ಕುಟುಂಬಸ್ಥರು ಮಾನಸಿಕ ಧೈರ್ಯ ತಂದುಕೊಳ್ಳಬೇಕು. ಸರ್ಕಾರ ಸಂತ್ರಸ್ತೆಯ ಜೊತೆ ಇರಲಿದೆ. ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಸರ್ಕಾರ ನೀಡಲಿದೆ ಎಂದು ಹೇಳಿದರು.
ಸಂತ್ರಸ್ತೆಯ ಜೊತೆ ಸರ್ಕಾರ, ಆರೋಗ್ಯ ಇಲಾಖೆ ಇರಲಿದೆ. ಯುವತಿಯ ಪೋಷಕರ ನೋವು ಸರ್ಕಾರಕ್ಕೆ ಅರ್ಥವಾಗುತ್ತದೆ. ಘಟನೆಯ ವಿಷಯ ತಿಳಿದು ಅತೀವ ದು:ಖವಾಗಿದೆ. ಇದು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ. ಮಹಾ ಕ್ರೌರ್ಯವನ್ನು ಒಬ್ಬ ವ್ಯಕ್ತಿ ಹೇಗೆ ಮಾಡುತ್ತಾನೆ ಎನ್ನುವುದು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಆದಷ್ಟು ಶೀಘ್ರದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವ ಮೂಲಕ ಸಮಾಜ ಘಾತುಕರಿಗೆ ಎಚ್ಚರಿಕೆಯ ಸಂದೇಶ ನೀಡುವ ಅಗತ್ಯವಿದೆ ಎಂದರು.
‘ಸೆಂಟ್ ಜಾನ್ ಆಸ್ಪತ್ರೆಯ ಜೊತೆ ಬೆಂಗಳೂರು ಮೆಡಿಕಲ್ ಕಾಲೇಜು ಕೂಡ ಯುವತಿಯ ಶಸ್ತ್ರ ಚಿಕಿತ್ಸೆಗೆ ನೆರವು ನೀಡಲಿದೆ. ಸಂತ್ರಸ್ತ ಯುವತಿಗೆ ಶೇ.35% ಸುಟ್ಟ ಗಾಯಗಳಾಗಿದ್ದು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಯುವತಿಗೆ ಅಗತ್ಯವಿರುವ ಚರ್ಮ ಕಸಿ ಸೇರಿದಂತೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ನಾನು ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯಧನ ನೀಡಲು ನಿರ್ಧರಿಸಿದ್ದೇನೆ. ಯುವತಿಯ ಚಿಕಿತ್ಸೆ ಅಷ್ಟೇ ಅಲ್ಲದೆ ಆಕೆಯ ಮುಂದಿನ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ರೀತಿಯ ಅಮಾನವೀಯ ದುಷ್ಕೃತ್ಯಗಳು ಮರುಕಳಿಸದಂತೆ ವಿಕೃತ ಮನಸ್ಸುಗಳಿಗೆ ಕಡಿವಾಣ ಹಾಕಿ, ಯುವತಿಯರಿಗೆ ಸುರಕ್ಷಿತ ಸಮಾಜ ನಿರ್ಮಿಸುವತ್ತ ಇಡೀ ಸಮಾಜ ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.