ಜೈಪುರ್: ಬಿಜೆಪಿ ನಾಯಕನನ್ನು ಹತ್ಯೆಗೈದ ಆರೋಪಿ ಕುಲದೀಪ್ ಜಘೀನಾನನ್ನು ಪೊಲೀಸ್ ಬಸ್ಸಿನೊಳಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಬುಧವಾರ ನ್ಯಾಯಾಲಯದ ವಿಚಾರಣೆಗಾಗಿ ಬಸ್‍ನಲ್ಲಿ ಆರೋಪಿಯನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ರಾಜಸ್ಥಾನದ ಭರತ್‍ಪುರದ ಅಮೋಲಿ ಟೋಲ್ ಪ್ಲಾಜಾ ಬಳಿ ಕಾರು ಮತ್ತು ಎರಡು ಬೈಕ್‍ಗಳಲ್ಲಿ ಬಂದ 12 ಜನರ ಗುಂಪು ಕೊಲೆ ಆರೋಪಿಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಈ ವೇಳೆ ಜೊತೆಗಿದ್ದ ಇನ್ನೋರ್ವ ಆರೋಪಿಗೂ ಗುಂಡು ತಗುಲಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಪು ಏಕಾಏಕಿ ಬಸ್‍ನೊಳಗೆ ನುಗ್ಗಿ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಮೇಲೆ ಗುಂಡಿನ ದಾಳಿ ನಡೆಸಿದೆ.
ಇಬ್ಬರು ಕೊಲೆ ಆರೋಪಿಗಳನ್ನು ಭರತ್‍ಪುರದ ಆರ್‍ಬಿಎಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಜಘೀನಾ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ವಿಜಯಪಾಲ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 4 ರಂದು ಭರತ್‍ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೃಪಾಲ್ ಜಘೀನಾ ಕೊಲೆಯಲ್ಲಿ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.