ಸ್ಪ್ಯಾಮ್ ಖಾತೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪ; ಟ್ವಿಟರ್ ವಿರುದ್ಧ ದಾವೆ ಹೂಡಿದ ಎಲಾನ್ ಮಸ್ಕ್

Prasthutha|

ವಾಷಿಂಗ್ಟನ್ : 44 ಬಿಲಿಯನ್ ಡಾಲರ್ ಖರೀದಿ ಒಪ್ಪಂದ ಕೈಬಿಟ್ಟ ಬಳಿಕ  ಟ್ವಿಟರ್ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಪ್ರತಿಯಾಗಿ   ಉದ್ಯಮಿ ಎಲಾನ್ ಮಸ್ಕ್  ಸಹ ಪ್ರತಿ ದಾವೆ ಹೂಡಿದ್ದಾರೆ.

- Advertisement -

ಆದರೆ ಮೊಕದ್ದಮೆಯ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ನ್ಯಾಯಾಲಯದ ನಿಯಮಗಳ ಅಡಿಯಲ್ಲಿ ಭಾಗಶಃ ಪರಿಷ್ಕರಿಸಿದ ಬಳಿಕ ಶೀಘ್ರದಲ್ಲೇ ಮಾಹಿತಿ ಲಭ್ಯವಾಗಬಹುದು ಎಂದು ತಿಳಿದು ಬಂದಿದೆ.

ಪ್ರತಿ ಷೇರಿಗೆ 54.20 ಡಾಲರ್ ನೀಡುವ ಮೂಲಕ ಟ್ವಿಟರ್‌ ಖರೀದಿಗೆ ಮಸ್ಕ್ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ಕಂಪನಿಯು ತನ್ನ ನಕಲಿ ಮತ್ತು ಸ್ಪ್ಯಾಮ್ ಖಾತೆಗಳ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿ ಒಪ್ಪಂದವನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದ್ದರು.

- Advertisement -

ಟ್ವಿಟರ್ ಖರೀದಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಮಸ್ಕ್ ಬೆದರಿಕೆ ಹಾಕಿದ್ದ ಬೆನ್ನಲ್ಲೇ ಟ್ವಿಟರ್ ದಿನಕ್ಕೆ 1 ಮಿಲಿಯನ್‌ಗಿಂತಲೂ ಹೆಚ್ಚು ಸ್ಪ್ಯಾಮ್ ಖಾತೆಗಳನ್ನು ಅಮಾನತುಗೊಳಿಸುತ್ತಿರುವುದಾಗಿ ಬಹಿರಂಗಪಡಿಸಿದ್ದು,ಈ ಮಧ್ಯೆ, ಟ್ವಿಟರ್ ಮತ್ತು ಎಲಾನ್ ಮಸ್ಕ್ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 17ರಿಂದ ಐದು ದಿನಗಳ ವಿಚಾರಣೆಗೆ ಅಮೆರಿಕದ ನ್ಯಾಯಾಧೀಶರು ಸಮಯ ನಿಗದಿ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯ ನ್ಯಾಯಾಧೀಶರಾದ ಕ್ಯಾಥಲೀನ್ ಮೆಕ್‌ಕಾರ್ಮಿಕ್ ಅವರು ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಟ್ವಿಟರ್ ಸಂಸ್ಥೆಯು ಅಕ್ಟೋಬರ್ 10ರಂದು ವಿಚಾರಣೆಯನ್ನು ಪ್ರಾರಂಭಿಸಲು ಬಯಸಿತ್ತು, ಆದರೆ, ಮಸ್ಕ್ ಅವರ ಮನವಿ ಮೇರೆಗೆ ವಿಚಾರಣೆಯನ್ನು ಅಕ್ಟೊಬರ್ 17ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ.



Join Whatsapp