ಪೊಲೀಸ್ ಜೀಪ್’ನಿಂದ ಬಿದ್ದು ಆರೋಪಿ ಸಾವು: ಮೂವರು ಪೊಲೀಸರ ವಿರುದ್ಧ ಕೇಸ್

Prasthutha|

ಚಾಮರಾಜನಗರ: ಪೊಲೀಸ್ ಜೀಪ್’ನಿಂದ ಬಿದ್ದು ಆರೋಪಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ಎಫ್’ಐಆರ್ ದಾಖಲಾಗಿದೆ.

ಯಳಂದೂರು ವೃತ್ತದ ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಎಸ್’ಐ ಮಾದೇಗೌಡ, ಪೊಲೀಸ್ ಕಾನ್ಸ್ಟೇಬಲ್ ಸೋಮಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಪೊಲೀಸರು ಮಗನನ್ನು ಹಿಂಸಿಸಿ ಕೊಂದಿದ್ದಾರೆಂದು ಮೃತ ನಿಂಗರಾಜು ತಾಯಿ ಮಹದೇವಮ್ಮ ದೂರು ಕೊಟ್ಟಿದ್ದಾರೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಅಪ್ರಾಪ್ತ ಬಾಲಕಿ ಅಪಹರಣ ಕೇಸ್’ಗೆ ಸಂಬಂಧಿಸಿದಂತೆ ನಿಂಗರಾಜು ವಿರುದ್ಧ ಮಾಂಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗಾಗಿ ಪೊಲೀಸರು ನಿಂಗರಾಜುನನ್ನು ಠಾಣೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಜೀಪ್’ನಿಂದ ನಿಂಗರಾಜು ನೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಜೀಪ್’ನಿಂದ ನೆಗೆದ ಬಳಿಕ ಗಂಭೀರ ಗಾಯಗಳಾಗಿದ್ದರಿಂದ ಯಳಂದೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಘಟನೆ ನಂತರ ಪೊಲೀಸರೇ ಮಗನ ಸಾವಿಗೆ ಕಾರಣ ಎಂದು ಮೃತ ನಿಂಗರಾಜು ತಾಯಿ ಆರೋಪಿಸಿದ್ದರೆ, ನಿನ್ನೆ ಯಳಂದೂರು ಠಾಣೆ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದಾದ ನಂತರ ಕುಟುಂಬಸ್ಥರು ಪೊಲೀಸರ ವಿರುದ್ಧ ದೂರು ದಾಖಲಿಸಿದ್ದಾರೆ. ಈಗ ದೂರಿನನ್ವಯ ಮೂವರು ಪೊಲೀಸರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ನಿನ್ನೆ ಎಸ್ಪಿ ಶಿವಕುಮಾರ್ ಕೂಡ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ.

- Advertisement -