ಸಿಮಿ ಕಾರ್ಯಕರ್ತರೆಂದು UAPA ಯಡಿ ಬಂಧನ| 20 ವರ್ಷಗಳ ಬಳಿಕ ಸಾಕ್ಷ್ಯವಿಲ್ಲದೆ ಬಿಡುಗಡೆ!!

Prasthutha|

ನಿಷೇಧಿತ ಸಂಘಟನೆ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ’ (ಸಿಮಿ) ಯ ಸದಸ್ಯರು ಎಂಬ ಆರೋಪದಲ್ಲಿ ಸುಮಾರು 19 ವರ್ಷಗಳ ಹಿಂದೆ ಬಂಧಿತರಾಗಿದ್ದ 122 ಮಂದಿಯನ್ನು ಗುಜರಾತ್ ನ ಸೂರತ್ ನ್ಯಾಯಾಲಯವೊಂದು ಇಂದು ಖುಲಾಸೆಗೊಳಿಸಿದೆ.

- Advertisement -


ಸುಮಾರು 2 ದಶಕಗಳ ಕಾಲ ತಮ್ಮ ಅಮೂಲ್ಯ ಜೀವನವನ್ನು ಜೈಲಿನಲ್ಲಿ ಕಳೆದ 122 ಮಂದಿ ಮುಸ್ಲಿಂ ಯುವಕರ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2001 ರ ಡಿಸೆಂಬರ್‌ನಲ್ಲಿ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ –ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟ 122 ಮಂದಿಯನ್ನು ಗುಜರಾತ್‌ನ ಸೂರತ್‌ನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎ.ಎನ್. ದೇವ್ ಅವರು ಖುಲಾಸೆಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ಅವಧಿಯಲ್ಲಿ ಒಟ್ಟು ಐದು ಮಂದಿ ಮೃತಪಟ್ಟಿದ್ದರು.


ಆರೋಪಿತ ವ್ಯಕ್ತಿಗಳು ಸಿಮಿಗೆ ಸೇರಿದವರು ಮತ್ತು ನಿಷೇಧಿತ ಸಂಘಟನೆಯ ಚಟುವಟಿಕೆಗಳನ್ನು ಉತ್ತೇಜಿಸಲು ಒಟ್ಟುಗೂಡಿದ್ದರು ಎಂಬ ಆರೋಪವನ್ನು ದೃಢೀಕರಿಸುವ “ವಿಶ್ವಾಸಾರ್ಹ ಮತ್ತು ತೃಪ್ತಿದಾಯಕ” ಸಾಕ್ಷ್ಯಗಳನ್ನು ಹಾಜರುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

- Advertisement -


ಯುಎಪಿಎ ಅಡಿಯಲ್ಲಿ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ
ಬಂಧಿತರು ನಿಷೇಧಿತ ಸಿಮಿಯ ಸದಸ್ಯರಾಗಿದ್ದಾರೆ. ಸಂಘಟನೆಯ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ವಿಸ್ತರಿಸಲು ನಗರದ ಸಗ್ರಾಂಪುರದ ಸಭಾಂಗಣದಲ್ಲಿ ಸಭೆ ಆಯೋಜಿಸಿದ್ದರು ಎಂಬ ಆರೋಪದಲ್ಲಿ ಯುಎಪಿಎಯ ವಿವಿಧ ಕಲಂಗಳಡಿ ಡಿಸೆಂಬರ್ 28, 2001 ರಂದು ಸೂರತ್‌ನ ಅಥ್ವಾಲೈನ್ಸ್ ಪೊಲೀಸರು 127 ಜನರನ್ನು ಬಂಧಿಸಿದ್ದರು
ಕೇಂದ್ರ ಸರ್ಕಾರವು ಸೆಪ್ಟೆಂಬರ್ 27, 2001 ರ ಅಧಿಸೂಚನೆ ಮೂಲಕ ಸಿಮಿ ಸಂಘಟನೆಯನ್ನು ನಿಷೇಧಿಸಿತ್ತು.


ಆರೋಪಿಗಳು ಗುಜರಾತ್, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಬಿಹಾರ ಮೂಲದವರಾಗಿದ್ದಾರೆ.
ಅವರು ಸಿಮಿ ಸಂಘಟನೆಗೆ ಸೇರಿದವರಲ್ಲ. ಆಲ್ ಇಂಡಿಯಾ ಮೈನಾರಿಟಿ ಎಜುಕೇಶನ್ ಬೋರ್ಡ್ ನ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿದ್ದ ಸೆಮಿನಾರ್‌ನಲ್ಲಿ ಭಾಗವಹಿಸಲು ಅಲ್ಲಿ ಜಮಾಯಿಸಿದ್ದರು ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು.
ಅವರು ಶಾಂತಿಯುತವಾಗಿ ಸೆಮಿನಾರ್ ನಲ್ಲಿ ಭಾಗವಹಿಸಲು ಧಾರ್ಮಿಕ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ನಗರಕ್ಕೆ ಆಗಮಿಸಿದ್ದರು ಎಂದು ಅವರು ವಾದ ಮಂಡಿಸಿದ್ದರು.

Join Whatsapp