ಅಡವಿಟ್ಟಿದ್ದ ಆಭರಣ ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ

Prasthutha|

ಮೈಸೂರು: ಅಡವಿಟ್ಟಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಕುವೆಂಪು ನಗರ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

- Advertisement -


ಆರೋಪಿಯನ್ನು ರಾಜಸ್ಥಾನ ಮೂಲದ ನೇಮರಾಮ್‌ ಸಿರ್ವಿ ಎಂದು ಗುರುತಿಸಲಾಗಿದೆ. ವಿವೇಕಾನಂದ ನಗರದಲ್ಲಿ 10 ವರ್ಷಗಳಿಂದ ಮಾರುತಿ ಜ್ಯುವೆಲ್ಲರಿ ಹಾಗೂ ಬ್ಯಾಂಕರ್ಸ್‌ ಎಂಬ ಅಂಗಡಿ ನಡೆಸುತ್ತಿದ್ದ ಈತನನ್ನು ನಂಬಿ ಹಲವರು ಚಿನ್ನವನ್ನು ಅಡವಿಟ್ಟಿದ್ದರು. ಹೊಸ ಆಭರಣಗಳನ್ನು ತಯಾರಿಸಲು ಮುಂಗಡ ಹಣವನ್ನೂ ನೀಡಿದ್ದರು.


ಆದರೆ ನ.9ರಂದು ಆರೋಪಿ ನೇಮರಾಮ್‌ ಏಕಾಏಕಿ ಅಂಗಡಿಯ ಬಾಗಿಲುಮುಚ್ಚಿ ಆಭರಣ ಸಮೇತ ಪರಾರಿಯಾಗಿದ್ದನು. ಅಂಗಡಿ ಕಟ್ಟಡದ ಮಾಲೀಕರಿಂದಲೂ ಹಣ ಪಡೆದು ವಂಚಿಸಿದ್ದ ಈತನ ವಿರುದ್ಧ ಕುವೆಂಪುನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.
ರಾಜಸ್ಥಾನಕ್ಕೆ ತೆರಳಿದ ಆರೋಪಿ ಪಾಲಿ ಜಿಲ್ಲೆಯ ಒಪೊರಿಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ. ಕುವೆಂಪು ನಗರ ಠಾಣೆಯ ಪೊಲೀಸರ ತಂಡವು ರಾಜಸ್ಥಾನಕ್ಕೆ ಬಂದಿರುವುದನ್ನು ಸ್ನೇಹಿತರ ಮೂಲಕ ತಿಳಿದ ಆರೋಪಿ ಅಲ್ಲಿಂದ ಪರಾರಿಯಾಗಿ ಬೆಂಗಳೂರಿಗೆ ಬಂದಿದ್ದ. ಅಲ್ಲಿಯೂ ಆರೋಪಿಯ ಬೆನ್ನತ್ತಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

- Advertisement -


ನೇಮಿರಾಜ್‌ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಆಭರಣ ಅಡವಿಟ್ಟ ಹಲವು ಮಂದಿ ಕುವೆಂಪು ನಗರ ಠಾಣೆಗೆ ಬಂದು ದೂರು ನೀಡಲು ಆರಂಭಿಸಿದ್ದಾರೆ. ಹೊಸ ಆಭರಣ ತಯಾರಿಕೆಗೆ ಮುಂಗಡವಾಗಿ 30 ಮಂದಿ ಹಣ ನೀಡಿದ್ದು ಈಬಗ್ಗೆ ತನಿಖೆ ನಡೆಯುತ್ತಿದೆ.



Join Whatsapp