ಲಕ್ನೋ: ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ ಉತ್ತರ ಪ್ರದೇಶದ AIMIM ಅಧ್ಯಕ್ಷ ಶೌಕತ್ ಅಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಭಾಲ್ ಜಿಲ್ಲೆಯ ಕೊತ್ವಾಲಿ ವ್ಯಾಪ್ತಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಶೌಕತ್ ಅಲಿ “ಬಿಜೆಪಿ ದುರ್ಬಲಗೊಂಡಾಗಲೆಲ್ಲಾ, ಅದರ ನಾಯಕರು ಮುಸ್ಲಿಮರಿಗೆ ಸಂಬಂಧಿಸಿದ ವಿವಾದಗಳನ್ನು ಎಬ್ಬಿಸುತ್ತಾರೆ” ಎಂಬ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅರ್ಚಿತ್ ಅಗರ್ವಾಲ್ ಎಂಬಾತ ವಿರುದ್ಧ ದೂರು ನೀಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ.
ಮುಸ್ಲಿಮರು ಅನೇಕ ಮಕ್ಕಳನ್ನು ಹುಟ್ಟಿಸುತ್ತಾರೆ. ಎರಡು ಮೂರು ಮದುವೆಯಾಗುತ್ತಾರೆ ಎಂದು ನೀವು ಹೇಳುತ್ತೀರಿ.ಹೌದು, ನಾವು ಎರಡು ಮದುವೆಯಾದರೂ ಇಬ್ಬರೂ ಹೆಂಡತಿಯರಿಗೆ ಸಮಾನ ಗೌರವವನ್ನು ನೀಡುತ್ತೇವೆ, ಆದರೆ ನೀವು (ಹಿಂದೂಗಳು) ಒಬ್ಬ ಮಹಿಳೆಯನ್ನು ಮದುವೆಯಾಗುತ್ತೀರಿ. ಯಾರಿಗೂ ಗೊತ್ತಿಲ್ಲದೆ ಮೂವರು ಪ್ರೇಯಸಿಗಳನ್ನು ಇಟ್ಟುಕೊಳ್ಳುತ್ತೀರಿ” ಎಂದು ಶೌಕತ್ ಅಲಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿರುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಅಡಿಯಲ್ಲಿ ಅಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಸಾಮರಸ್ಯಕ್ಕೆ ಭಂಗ ತರುವಂತಹ ಯಾವುದೇ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಶ್ರಾ ಹೇಳಿದರು.