ನವದೆಹಲಿ; 2017ರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮತ್ತು ಗುಪ್ತಚರ ಇಲಾಖೆಗೆ ಸಂಬಂಧಪಟ್ಟ ಸಾಧನಗಳ ಖರೀದಿ ಒಪ್ಪಂದದ ಭಾಗವಾಗಿ ಅಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಸ್ರೇಲ್’ನಿಂದ ಪೆಗಾಸಸ್ ಸ್ಪೈವೇರ್ನ್ನು ಖರೀದಿ ಮಾಡಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಶಸ್ತ್ರಾಸ್ತ್ರ ಒಪ್ಪಂದದ ಪ್ಯಾಕೇಜ್ನಲ್ಲಿ ಕ್ಷಿಪಣಿ ಖರೀದಿಯೂ ಸೇರ್ಪಡೆಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ವರದಿ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಮ್ಮ ಪ್ರಜಾಪ್ರಭುತ್ವದ ಪ್ರಾಥಮಿಕ ಸಂಸ್ಥೆಗಳು, ರಾಷ್ಟ್ರ ನಾಯಕರು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಖರೀದಿಸಿತು. ಫೋನ್ ಕದ್ದಾಲಿಕೆ ಮಾಡುವ ಮೂಲಕ ಆಡಳಿತ ಪಕ್ಷ, ವಿರೋಧ ಪಕ್ಷ, ಸೇನೆ, ನ್ಯಾಯಾಂಗ ಎಲ್ಲರ ಮೇಲೂ ಕಣ್ಣು ಇಡಲಾಗಿದೆ. ಇದು ದೇಶದ್ರೋಹ” ಎಂದು ರಾಹುಲ್ ಗಾಂಧಿ ಟ್ವಿಟರ್’ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿ ಜಾಲತಾಣ ದಿ ವೈರ್ ನಡೆಸಿದ ತನಿಖೆಯಲ್ಲಿ , ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್ ಬಳಸಿ, ಕೇಂದ್ರ ಸರ್ಕಾರವು ತಮ್ಮ ವಿರೋಧಿಗಳು, ಪತ್ರಕರ್ತರು, ಉದ್ಯಮಿಗಳು ಹಾಗೂ ಇತರ ಪ್ರಮುಖರ ಮೇಲೆ ಕಣ್ಣಿಡಲು ಸ್ಪೈವೇರ್’ಅನ್ನು ಬಳಸಿರುವ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಆಗಿನ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ, ಸೇರಿದಂತೆ 300ಕ್ಕೂ ಹೆಚ್ಚು ಪ್ರಮುಖರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ದಿ ವೈರ್ ಪ್ರಕಟಿಸಿತ್ತು.