ಕೆಎಸ್’ಆರ್ ಟಿಸಿ ಸಿಬ್ಬಂದಿಗೆ 1 ಕೋಟಿ  ಮೊತ್ತದ ಅಪಘಾತ ವಿಮಾ ಯೋಜನೆ ಜಾರಿ

Prasthutha|

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( ಕೆಎಸ್’ಆರ್’ಟಿಸಿ) ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿ ಮಾಡಲಾಗಿದೆ.

- Advertisement -

ಈಗಾಗಲೇ ರೂ 50 ಲಕ್ಷ ವಿಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್’ಬಿಐ) ಹಾಗೂ ಇಂದು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ಮಾಡಿಕೊಂಡ ಒಡಂಬಡಿಕೆಯ ರೂ.50 ಲಕ್ಷ ಸೇರಿ, ಒಟ್ಟು ರೂ.1 ಕೋಟಿ ಅಪಘಾತ ವಿಮೆಯನ್ನು ಸಂಸ್ಥೆಯ ಸಿಬ್ಬಂದಿಗೆ ಜಾರಿ ಮಾಡಲಾಗಿದ್ದು ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಇದು ಪ್ರಪ್ರಥಮವಾಗಿದೆ.

ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಶಾಸಕ ಹಾಗೂ ಅಧ್ಯಕ್ಷ ಎಂ. ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ಅಂಗ್ರೂಪ್ ಸೋನಂ, ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಯ ಒಡಂಬಡಿಕೆಗೆ ಸಹಿ ಹಾಕಿದರು.

- Advertisement -

ನಿಗಮದ ಸಿಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಎಸ್ ಬಿಐ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಜಾರಿಗೆ ತಂದಿದೆ.

ಇದರ ಮುಂದುವರಿದ ಭಾಗವಾಗಿ, ಇಂದು ನಿಗಮವು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ರವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು , ಅದರಂತೆ ಸಿಬಂದಿಗೆ ರೂ.50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.

ಈ ವಿಮಾ ಯೋಜನೆಗೆ ಸಿಬಂದಿ ತಿಂಗಳಿಗೆ ರೂ.62.50 + ಜಿ.ಎಸ್.ಟಿ ಸೇರಿದಂತೆ (ವಾರ್ಷಿಕ ರೂ.885/- ಪ್ರೀಮಿಯಂ) ಪಾವತಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ, ಮಾತನಾಡಿದ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದ್ದು, ಅಪಘಾತ (On duty ಮತ್ತು Off duty ಒಳಗೊಂಡಂತೆ ನೀಡಲಾಗುವ) ವಿಮಾ ಯೋಜನೆಯಾಗಿರುವುದು ಸಿಬಂದಿಗೆ ಮತ್ತಷ್ಟು ಅನುಕೂಲವಾಗಲಿದೆಯೆಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ. ನವೀನ್ ಭಟ್ ವೈ, ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರಾದ ಅನಂತ ಸುಬ್ಬರಾವ್ ,ಉಷಾ ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು.



Join Whatsapp