►ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ: ಸಿಎಂ ಘೋಷಣೆ
ಹಾವೇರಿ: ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಮಂದಿ ಮೃತಪಟ್ಟು, 16 ಜನ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ 10 ಮಂದಿಯು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ನಿವಾಸಿಗಳು. ಇವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸವಣೂರಿನ ಪ್ರತಿ ಓಣಿಯಲ್ಲೂ ದುಃಖ ಮಡುಗಟ್ಟಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪಟ್ಟಣದ ಹಲವೆಡೆ ಪ್ರತ್ಯೇಕವಾಗಿ ವಾಸವಿದ್ದ ಮೃತರು, ತರಕಾರಿ ಹಾಗೂ ಹಣ್ಣು ವ್ಯಾಪಾರಕ್ಕೆಂದು ಕುಮಟಾ ಸಂತೆಗೆ ಹೊರಟಿದ್ದರು. ಇವರ ಸಾವಿನಿಂದ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಂಬಂಧಿಕರು ಮನೆಗೆ ಬಂದು ಕುಟುಂಬಸ್ಥರನ್ನು ಸಮಾಧಾನ ಮಾಡುತ್ತಿದ್ದಾರೆ. ಆದರೆ, ದಾರುಣ ಘಟನೆಯಿಂದ 10 ಜನ ಒಂದೇ ದಿನ ಮೃತಪಟ್ಟಿದ್ದರಿಂದ ಇಡೀ ಪಟ್ಟಣವೇ ದುಃಖದಲ್ಲಿದೆ.
ಓಣಿಯ ಮುಖಂಡರೇ ಮುಂದೆ ನಿಂತು ವಿಧಿವಿಧಾನ ಪೂರೈಸಲು ಸಿದ್ದತೆ ಮಾಡುತ್ತಿದ್ದಾರೆ.
ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಅವರು ಯಲ್ಲಾಪುರ ಆಸ್ಪತ್ರೆಯಲ್ಲಿಯೇ ಬೀಡು ಬಿಟ್ಟಿದ್ದಾರೆ.
ಫಯಾಜ್ ಜಮಖಂಡಿ (45), ವಾಸೀಂ ಮುಡಗೇರಿ (35), ಇಜಾಜ್ ಮುಲ್ಲಾ (20), ಸಾದೀಕ್ ಭಾಷ್ (30), ಗುಲಾಮ್ ಹುಷೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24), ಜಲಾಲ ಬಾಷಾ (26) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಪಲ್ಟಿಯಾದ ಲಾರಿಯಲ್ಲಿ ಒಟ್ಟು 28 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಈಗ ಲಭ್ಯವಾಗಿದೆ. ಯಲ್ಲಾಪುರ ಆಸ್ಪತ್ರೆಗೆ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತ ದೇಹಗಳನ್ನು ಆದಷ್ಟು ಶೀಘ್ರವಾಗಿ ಮೃತರ ಊರಿಗೆ ಸಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ: ಸಿಎಂ ಘೋಷಣೆ
ಯಲ್ಲಾಪುರದ ಗುಳ್ಳಾಪುರ ಹಾಗೂ ರಾಯಚೂರಿನ ಸಿಂಧನೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಜತೆಗೆ, ಗಾಯಾಳುಗಳಿಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿದೆ.
ಅವಸರ, ಅತಿ ವೇಗದ ಚಾಲನೆ ಹಾಗೂ ಅಜಾಗರೂಕತೆ ಅಪಘಾತಕ್ಕೆ ಕಾರಣ. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸುರಕ್ಷಿತರಾಗಿರಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.