ವಿಟ್ಲ: ಮೆಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬಸ್ಸಿನಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಇಲ್ಲಿನ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ನಡೆದಿದೆ.
ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸೇರಿದ ಬಸ್ಸಿನಲ್ಲಿ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸೇರಿದ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ಸಿಕ್ಕಿಹಾಕಿಕೊಂಡಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ ಮೂವರು ಸ್ಟಾಪ್ ನರ್ಸ್ ಮತ್ತು ಬೈಕ್ ಸವಾರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಟ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರು ಕಡೆಗೆ ಮಂಗಳಪದವು, ಅನಂತಾಡಿ, ಮಾಣಿ ಕಡೆಯ ಸ್ಟಾಪ್ ನರ್ಸ್ ಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 13 ಜನರಿದ್ದರು. ಬೈಕ್ ಸವಾರ ಇರಂದೂರು ಪಡೀಲ್ ನಿವಾಸಿ ಝಾಕೀರ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಬಸ್ ರಸ್ತೆ ಬದಿಯಲ್ಲಿರುವ ಮರದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕದಲ್ಲಿ ಪ್ರಪಾತ ಇದ್ದು, ಮಹಿಳೆಯೊಬ್ಬರು ಕೆಳಗಡೆ ಉರುಳಿ ಬಿದ್ದಿದ್ದಾರೆ.
ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.