ಬೆಂಗಳೂರು, ಮಂಗಳೂರು ಸೇರಿದಂತೆ 18 ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಏಕಕಾಲಕ್ಕೆ ದಾಳಿ, ಅಕ್ರಮ ಆಸ್ತಿಪಾಸ್ತಿ ಪತ್ತೆ

Prasthutha|

ಬೆಂಗಳೂರು: ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ‌ ಆಸ್ತಿಗಳಿಸಿರುವ  ಭ್ರಷ್ಟರ ವಿರುದ್ಧ ಭರ್ಜರಿ ಬೇಟೆಯಾಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು 18 ಮಂದಿ ಅಧಿಕಾರಿಗಳನ್ನು ಬಲೆಗೆ ಕೆಡವಿ ನಗದು , ಚಿನ್ನ, ಐಷಾರಾಮಿ ವಸ್ತುಗಳು ಸೇರಿ  ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

- Advertisement -

ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಯನ್ನು ಹೊಂದಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 18 ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ಇಂದು ಮುಂಜಾನೆಯಿಂದ ನಡೆದಿರುವ ದಾಳಿ ಮಧ್ಯಾಹ್ನದವರೆಗೆ ಮುಂದುವರೆದಿದ್ದು, ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳ ಭಾರೀ ಪ್ರಮಾಣದ ಆಸ್ತಿ ಪಾಸ್ತಿಯನ್ನು ಕಂಡು ಎಸಿಬಿ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

ಬೆಂಗಳೂರು, ಬೆಳಗಾವಿ, ಬಾದಾಮಿ, ರಾಯಚೂರು, ದಾವಣಗೆರೆ, ವಿಜಯಪುರ, ಹಾವೇರಿ, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳ 78 ಕಡೆಗಳಲ್ಲಿ ಎಸಿಬಿ ಜಿಲ್ಲಾ ಎಸ್ ಪಿಗಳ ನೇತೃತ್ವದಲ್ಲಿ ನೂರಾರು ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ 18 ಮಂದಿ ಭ್ರಷ್ಟರ ಆಸ್ತಿ ಪಾಸ್ತಿಗಳ ಶೋಧ ಕಾರ್ಯ ಕೈಗೊಳ್ಳಲಾಗಿದೆ.

- Advertisement -

ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್‌, ಬಿಡಿಎ ನಗರ ಯೋಜನಾ ವಿಭಾಗದ ರಾಕೇಶ್‌ ಕುಮಾರ್‌, ಯಾದಗಿರಿ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಮೇಶ್‌ ಕಣಕಟ್ಟೆ, ಲೋಕೋಪಯೋಗಿ ಇಲಾಖೆಯ ಕೌಜಲಗಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜ ಶೇಖರ್‌ ರೆಡ್ಡಿ ಪಾಟೀಲ್‌, ಗದಗ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್‌ ಬಸವಕುಮಾರ್‌ ಎಸ್‌. ಅಣ್ಣಿಗೇರಿ, ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್‌ ಎಸ್‌.ಎನ್‌. ಮಳಗಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ. ಶಿವಕುಮಾರ್‌, ಬಾದಾಮಿ ವಲಯ ಅರಣ್ಯಾಧಿಕಾರಿ ಶಿವಾನಂದ ಪಿ. ಶರಣಪ್ಪ ಖೇಡಗಿ, ರಾಮನಗರ ಉಪ ವಿಭಾಗಾಧಿಕಾರಿ ಮಂಜುನಾಥ್‌, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್‌, ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಹಾವೇರಿ ಕೃಷಿ ಉತ್ಪನ್ನ ನಿಯಂತ್ರಣ ಮಾರುಕಟ್ಟೆ ಸಹಾಯಕ ಎಂಜಿನಿಯರ್‌ ಕೃಷ್ಣನ್‌, ಗುಂಡ್ಲುಪೇಟೆ ಅಬಕಾರಿ ಇನ್‌ಸ್ಪೆಕ್ಟರ್‌ ಚಲುವರಾಜ್‌, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಗಿರೀಶ್‌, ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌., ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗವಿರಂಗಪ್ಪ, ಕೃಷ್ಣಾ ಭಾಗ್ಯ ಜಲ ನಿಗಮದ ದೇವದುರ್ಗ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ರೆಡ್ಡಿ ಪಾಟೀಲ್‌ ಮತ್ತು ಮಂಗಳೂರಿನ ಕೆಪಿಟಿಸಿಎಲ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾ ಸುಂದರ್‌ ರಾಜು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

ಉಪವಿಭಾಗದ ಸಹಾಯಕ ಅಭಿಯಂತರ ಅಧಿಕಾರಿ ಗಿರೀಶ್ ಅವರ ಯಲಬುರ್ಗಾದ ನಿವಾಸ, ಕಚೇರಿ ಹಾಗೂ ಬಾಗಲಕೋಟೆಯಲ್ಲಿರುವ ಮೂರು ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕೃಷ್ಣನ್​​ ಆರೇರ ಅವರ ಹಾವೇರಿಯ ಬಸವೇಶ್ವರ ನಗರದ ಕೃಷ್ಣನ್​​ ಅವರ ನಿವಾಸ, ಡೊಳ್ಳೇಶ್ವರ ಗ್ರಾಮದ ಮನೆ ಹಾಗೂ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಳೆದೊಂದು ವರ್ಷದಿಂದ ಗುಂಡ್ಲುಪೇಟೆಯಲ್ಲಿ ಅಬಕಾರಿ ಇನ್ಸ್​​​​ಪೆಕ್ಟರ್​  ಚೆಲುವರಾಜ್ ಅವರ ಕಚೇರಿ ಸೇರಿ ಎರಡು ಕಡೆ, ಮೈಸೂರು, ಚನ್ನರಾಯಪಟ್ಟಣ, ಮಂಡ್ಯ ಬೆಂಗಳೂರಲ್ಲಿ ಏಕಕಾಲದಲ್ಲಿ ದಾಳಿ‌ ನಡೆಸಲಾಗಿದೆ.

ಮಾವನ‌ ಮನೆ : ಮೈಸೂರಿನ‌‌ವಿಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ಕಚೇರಿ ಚನ್ನರಾಯಪಟ್ಟಣದ ಸಂಬಂಧಿಕರ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಾಲಕೃಷ್ಣ ಮಾವ ಕಾಂಗ್ರೆಸ್ ಮುಖಂಡ ಚಂದ್ರೇಗೌಡ ಅವರ ಹೊಳೆನರಸೀಪುರ-ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಮನೆ ಹಾಗೂ ಪಟ್ಟಣದಲ್ಲಿರುವ ನಿವಾಸಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅಂಗಡಿ ಮೇಲೆ ದಾಳಿ: ಬಾದಾಮಿ ವಲಯ ಅರಣ್ಯಾಧಿಕಾರಿ ಪಿಎಸ್​ ಖೇಡಗಿ ಅವರ ‌ ಮನೆ ಹಾಗೂ ಸಂಬಂಧಿಕರ ಮನೆ ,ಅಂಗಡಿ ಸೇರಿ ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯು ಮುಂದುವರೆದಿದ್ದು ಬಲೆಗೆ ಬಿದ್ದಿರುವ ಅಧಿಕಾರಿಗಳ ಬಳಿ ಪತ್ತೆಯಾಗಿರುವ ಅಪಾರ ಪ್ರಮಾಣದ ನಗದು,ಚಿನ್ನ,ಐಷಾರಾಮಿ ವಸ್ತುಗಳು,ಮನೆ,ನಿವೇಶನ ಜಮೀನು,ಸಂಬಂಧಿಕರ ಬಳಿ ದೊರೆತ ಅಕ್ರಮ ಆಸ್ತಿ ಪಾಸ್ತಿಯ ಪರಿಶೀಲನೆ ನಡೆಸಲಾಗಿದ್ದು ಸದ್ಯಕ್ಕೆ ಅವುಗಳ ಒಟ್ಟಾರೆ ಮೌಲ್ಯ ಪತ್ತೆಯಾಗಿಲ್ಲ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ

Join Whatsapp